August 24, 2026
Monday, August 24, 2026
spot_img

‘ಅನ್ನಂ ಬ್ರಹ್ಮ’ ಮಾಲಿಕೆ । ಯೋಗಶಾಸ್ತ್ರದಲ್ಲಿ ಮಹಿಳೆಯರ ಬಗ್ಗೆ ಪಕ್ಷಪಾತವಿಲ್ಲ, ಕಾಳಜಿಯಷ್ಟೇ ಇದೆ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಔಷಧಿಯ ಅಂಗಡಿಯಲ್ಲಿ ಎಲ್ಲಾ ಔಷಧಗಳನ್ನೂ ಎಲ್ಲರಿಗೂ ಕೊಡುವುದಿಲ್ಲ. ಕೆಲವು ಔಷಧಗಳನ್ನು ವೈದ್ಯರಿಂದ ಸೂಕ್ತ ಚೀಟಿಯನ್ನು ಹೊಂದಿದವರಿಗಷ್ಟೇ ನೀಡಲಾಗುತ್ತದೆ. ಹಾಗೆಯೇ ಕೆಲವು ಔಷಧಗಳಿಗೆ ಅದನ್ನು ಮಕ್ಕಳಿಗೆ ನೀಡುವಂತಿಲ್ಲ ಎಂಬ ನಿಯಮಗಳಿರುತ್ತದೆ. ಹಾಗೆಯೇ ಎಲ್ಲಾ ಯೋಗ – ಪ್ರಾಣಾಯಾಮಗಳನ್ನು ಎಲ್ಲರೂ ಮಾಡಬಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ನಿಯಮಗಳಿವೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಸೋಮವಾರದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅಮೃತಾಹಾರವೆಂಬ ಯೋಗ ಸೂಕ್ಷ್ಮದ ಕುರಿತಾಗಿ ಅವರು ಪ್ರವಚನ ಅನುಗ್ರಹಿಸಿದರು.

ಯೋಗ ಸೂಕ್ಷ್ಮವಾದ ಅಮೃತಪಾನವನ್ನು ಸಿದ್ಧಿಸಿಕೊಂಡವನಿಗೆ ತಕ್ಷಕ ಸರ್ಪದ ಮಹಾವಿಷದಿಂದಲೂ ಕೂಡ ಏನೂ ಆಗದು. ಒಮ್ಮೆ ಈ ಅಮೃತವನ್ನು ಆಸ್ವಾದಿಸಲು ಕಲಿತ ಯೋಗಿಯು ಮತ್ತೆ ಮತ್ತೆ ಅದನ್ನು ಬಯಸುತ್ತಾನೆ. ಈ ಅಮೃತದ ಆಸ್ವಾದನೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದ ಶ್ರೀಗಳು, ಜಾಲಂಧರ ಬಂಧ, ಮೂಲಬಂಧ, ಖೇಚರಿ, ವಿಪರೀತ ಕರಣಿ ಮುಂತಾದವುಗಳ ಕುರಿತು ಶ್ರೀಗಳು ವಿವರಿಸಿದರು.

ಮೂಲಬಂಧದ ಮೂಲಕ ಕುಂಡಲಿನೀ ಶಕ್ತಿಯ ಜಾಗೃತಿ ಪ್ರಕ್ರಿಯೆಯ ಯೋಗ ಸೂಕ್ಷ್ಮಗಳನ್ನು ವಿವರಿಸಿದ ಶ್ರೀಗಳು, ಮೂಲಬಂಧದ ವಿವರ, ಕುಂಡಲಿನೀ ಜಾಗೃತಿಯ ಮಾರ್ಗ, ಅದು ಜಾಗೃತವಾದಾಗ ಉಂಟಾಗುವ ಪ್ರಯೋಜನಗಳ ಕುರಿತಾಗಿ ಮಾಹಿತಿ ನೀಡಿದರು. ಈ ಪ್ರಕ್ರಿಯೆಯು ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತದೆ ಹಾಗೂ ಮೋಕ್ಷವೇ ಜೀವಿಯ ಪರಮ ಗುರಿ. ಮಹಿಳೆಯರು ಉಸಿರಾಟದ ವ್ಯಾಯಾಮಗಳನ್ನು ಮಾಡಬಹುದು. ಆದರೆ ಮೂಲಬಂಧ ಸಹಿತವಾದ ಪ್ರಾಣಾಯಾಮಗಳನ್ನು ಹಾಗೂ ಕೆಲವು ಯೋಗ ಪ್ರಕ್ರಿಯೆಗಳನ್ನು ಮಾಡಬಾರದು. ಯೋಗಶಾಸ್ತ್ರವು ಮಹಿಳೆಯರ ಕುರಿತಾಗಿ ಪಕ್ಷಪಾತವನ್ನು ಹೊಂದಿಲ್ಲ. ಆದರೆ ಕಾಳಜಿಯನ್ನು ಹೊಂದಿದೆ. ಕೆಲವು ಯೋಗ ಪ್ರಕ್ರಿಯೆಗಳಿಂದ ಮಹಿಳೆಯರ ದೇಹದ ಮೇಲೆ ವಿಪರೀತ ಪರಿಣಾಮಗಳು ಉಂಟಾಗುತ್ತವೆ. ಇದು ಮಹಿಳೆಯರ ಹೆಣ್ಣುತನಕ್ಕೆ ಸಂಚಕಾರವನ್ನು ತರಬಹುದು. ಹಾಗಾಗಿ ಎಚ್ಚರಿಕೆವಹಿಸಬೇಕು ಎಂದು ಅವರು ತಿಳಿಸಿದರು.

ಭಾರತೀಯ ಗ್ರಾನೈಟ್ ಮತ್ತು ಕಲ್ಲು ಕೈಗಾರಿಕೆಗಳ ಒಕ್ಕೂಟದ ಉಪಾಧ್ಯಕ್ಷ ಜಿ. ಎಮ್ ಹೆಗಡೆ, ನಿವೃತ್ತ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣ ಭಟ್ IPS ಉಪಸ್ಥಿತರಿದ್ಧು ಶ್ರೀಗಳ ಆಶೀರ್ವಾದ ಪಡೆದರು. ಯುನೈಟೆಡ್ ಕಿಂಕಡಮ್ (UK) ಹವ್ಯಕ ವಲಯದ ಪರವಾಗಿ ವಿವೇಕ ಭಟ್ ಮತ್ತು ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ದಿನಪ್ರಧಾನರಾದ ರಮಾನಂದ ಹೊಸ್ಮನೆ ದಂಪತಿಗಳು, ಸುರೇಶ್ ಭಟ್ ಆಡುಗೋಡಿ, ದಿನೇಶ್ ಹೆಗಡೆ, ನರಸಿಂಹ ಭಟ್ಟ ಬಡಗು, ಡಾ. ರವಿ ಪಾಂಡವಪುರ, ಸುಧನ್ವ ಶಾಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.

ಖಾರ್ವಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ:


ಪಾರಂಪರಿಕವಾಗಿ ಶ್ರೀಮಠಕ್ಕೆ ನಡೆದುಕೊಳ್ಳುತ್ತಿರುವ ಖಾರ್ವಿ ಸಮಾಜ ಹಾಗೂ ಕೊಂಕಣ ಖಾರ್ವಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಗುರುಪೀಠ ಹಾಗೂ ಖಾರ್ವಿ ಹಾಗೂ ಕೊಂಕಣ ಖಾರ್ವಿ ಸಮಾಜದ ಮಧ್ಯೆ ಪಾರಂಪರಿಕವಾಗಿ ಗುರುಶಿಷ್ಯ ಬಂಧವಿದ್ದು, ಶ್ರೀಮಠಕ್ಕೆ ಖಾರ್ವಿ ಸಮಾಜದ ಕುರಿತಾಗಿ ಕಳಕಳಿ ಸದಾ ಇದೆ. ಸಮಾಜದ ಸುಖದುಃಖಗಳಿಗೆ ಶ್ರೀಮಠ ಸದಾ ಇರಲಿದೆ ಎಂದರು.ಚಂದ್ರು ಖಾರ್ವಿ ಮರವಂತೆ, ವಾಸು ಖಾರ್ವಿ , ಸುರೇಶ್ ಖಾರ್ವಿ , ಚರಣ ಖಾರ್ವಿ, ಉಮಾಕಾಂತ ಖಾರ್ವಿ, ಗೋಪಾಲ ಖಾರ್ವಿ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !