ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮುನ್ನ ಸಾವಿರ ಬಾರಿ ಯೋಚಿಸಿ. ನಿಮ್ಮ ಮನೆ ಎಲ್ಲಿದೆ, ಹೇಗಿದೆ? ಮನೆಯಲ್ಲಿ ಏನೆಲ್ಲಾ ಇದೆ ಎನ್ನುವ ಮಾಹಿತಿ ಗೌಪ್ಯವಾದ್ದು. ಅದು ಗೌಪ್ಯವಾಗಿಯೇ ಉಳಿಯಬೇಕು. ಯುಟ್ಯೂಬ್ ವಿಡಿಯೋ ಮಾಡುತ್ತಾ ನನ್ನ ಬಳಿ ಇಷ್ಟೆಲ್ಲಾ ಚಿನ್ನ ಇದೆ ಎಂದು ತೋರಿಸಿಕೊಂಡು ಎಡವಟ್ಟು ಮಾಡಿಕೊಂಡಿದ್ದ ಯುಟ್ಯೂಬರ್ ಮನೆಯ ವಿಳಾಸವನ್ನು ಕಳ್ಳರು ಹುಡುಕಿದ್ದು ಹೇಗೆ? ಇಲ್ಲಿದೆ ಡೀಟೇಲ್ಸ್..
ನಾಗರಕೋಯಿಲ್ ಬಳಿಯ ತಮ್ಮತುಕೋಣಂನಲ್ಲಿ ವಾಸವಿರುವ ಯುಟ್ಯೂಬರ್ ಮಧುಮಿತಾ ಮನೆಯಲ್ಲಿ ಕಳ್ಳತನ ನಡೆದಿದೆ. ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ಕಳ್ಳತನ ನಡೆದ ಸ್ಥಳದಿಂದ ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂವರೆಗೆ ಇರುವ ಸುಮಾರು 160 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿ ಶಂಕಿತರನ್ನು ಪತ್ತೆಹಚ್ಚಲಾಗಿದೆ. ಈ ವೇಳೆ ಆರೋಪಿಗಳು ಕೆಲವು ಅಚ್ಚರಿ ವಿಚಾರಗಳನ್ನು ಬಾಯಿಬಿಟ್ಟಿದ್ದಾರೆ.
ಶ್ರೀವೈಕುಂಡಂನ ಸಿ. ಎಸಕಿಪಾಂಡಿ (30), ಮುಕ್ಕುಡಲ್ನ ಇ. ಮುರುಗನ್ (28), ಆಲಂಗುಲಂನ ಎಂ. ಮುರುಗೇಶನ್ (30) ಮತ್ತು ತಿಮ್ಮರಾಜಪುರಂನ ಪಿ. ತಂಗಪಾಂಡಿ (39) ಎನ್ನುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪ್ರಮುಖ ಆರೋಪಿ ಎಸಕಿಪಾಂಡಿ ಮನೆಯೊಳಗೆ ನುಗ್ಗಿ ಬಂಗಾರ ಕದ್ದಿದ್ದಾನೆ. ಉಳಿದವರು ಸಾಗಿಸಲು ಸಹಾಯ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಸದ್ಯ ಕಳ್ಳರು ಸುಮಾರು 118 ಪೌಂಡ್ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದರು ಎನ್ನಲಾಗಿದ್ದು, ಇದೀಗ ಅವರಿಂದ 98 ಪೌಂಡ್ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಷ್ಟು ಚಿನ್ನ ಎಲ್ಲಿದೆ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ರೀಲ್ಸ್ ಫಾಲೋ ಮಾಡ್ತಿದ್ದ ಕಳ್ಳರು
ಆರು ತಿಂಗಳಿನಿಂದ ಮಧುಮಿತಾ ಮಾಡುವ ಪ್ರತೀ ವಿಡಿಯೋಗಳನ್ನು ಇವರು ವೀಕ್ಷಣೆ ಮಾಡುತ್ತಿದ್ದರು. ವಿಡಿಯೋ ಮಾಡುವ ವೇಳೆ ಮಗುವಿನ ಶಾಲಾ ಬ್ಯಾಗ್ ಕಾಣಿಸಿತ್ತು.ಅದರಲ್ಲಿ ಮಗುವಿನ ಐಡಿ ಕಾರ್ಡ್ ಕಾಣಿಸಿತು. ಬ್ಯಾಗ್ನ ಮೇಲೆ ಶಾಲೆ ಹೆಸರು, ಏರಿಯಾ ಹೆಸರು ಹಾಗೂ ಐಡಿ ಕಾರ್ಡ್ನಲ್ಲಿ ಮನೆ ಅಡ್ರೆಸ್ ಇತ್ತು. ಅದನ್ನು ನೋಡಿ ಮನೆಯನ್ನು ಕಂಡುಹಿಡಿದೆವು. ಅದಾದ ನಂತರ ಮನೆಯ ಸುತ್ತಾ ಮುತ್ತಾ ಹಲವು ಬಾರಿ ರೌಂಡ್ಸ್ ಹೊಡೆದು ಮನೆಯಲ್ಲಿ ಯಾರಿದ್ದಾರೆ, ಎಷ್ಟೊತ್ತಿಗೆ ಹೋಗುತ್ತಾರೆ ಎಂದು ತಿಳಿದುಕೊಂಡೆವು ಎಂದಿದ್ದಾರೆ.
ಮಧುಮಿತಾ ಮತ್ತು ಅವರ ಪತಿ ವಿನೋದ್ ಕುಮಾರ್ ಇತ್ತೀಚೆಗೆ ತಮ್ಮತುಕೋಣಂನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಗುರುವಾರ ಸಂಜೆ ದಂಪತಿ ತಿರುನಲ್ವೇಲಿಗೆ ಹೋಗಿದ್ದರು. ಆ ಸಮಯದಲ್ಲಿ ಎಸಕಿಪಾಂಡಿ ಕಟ್ಟರ್ ಬಳಸಿ ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಮೊದಲ ಮಹಡಿಯಿಂದ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಈ ಪ್ರಕರಣವನ್ನು ರಾಜಕ್ಕಮಂಗಲಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನೀವು ಏನನ್ನು ತಿನ್ನುತ್ತಿದ್ದೀರಿ, ಯಾವ ಕೆಫೆಗೆ ಹೋಗಿದ್ದೀರಿ, ಎಲ್ಲಿ ಟ್ರಿಪ್ ಹೋಗಿದ್ದೀರಿ ಎನ್ನುವ ಮಾಹಿತಿಯನ್ನು ಹರಿಬಿಡುವ ಅಗತ್ಯ ಇಲ್ಲ. ಎಲ್ಲವನ್ನೂ ಶೇರ್ ಮಾಡಿಕೊಂಡರೆ ನಾನಾ ತೊಂದರೆ ಖಂಡಿತ ಎನ್ನುವುದಕ್ಕೆ ಈ ಪ್ರಕರಣವೇ ನಿದರ್ಶನವಾಗಿದೆ.



