ಮುಂದಿನ ಬಜೆಟ್ ನಲ್ಲಿ ಬಂಟ ಅಭಿವೃದ್ಧಿ ನಿಗಮ ಘೋಷಣೆ: ಸಿಎಂ ಸಿದ್ದರಾಮಯ್ಯ ಭರವಸೆ

ಹೊಸದಿಗಂತ ವರದಿ, ಉಡುಪಿ:

ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮುಂದಿನ ಬಜೆಟ್ ನಲ್ಲಿ ಬಂಟ ಅಭಿವೃದ್ಧಿ ನಿಗಮ ಘೋಷಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಶನಿವಾರ, ಉಡುಪಿಯಲ್ಲಿ ಜಾಗತಿಕ ಬಂಟ ಸಮ್ಮೇಳನ ಉದ್ಘಾಟಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.

ಸಮಾವೇಶದಲ್ಲಿ ಬಂಟರ ಅಭಿವೃದ್ಧಿ , ಸಂಘಟನೆ ಬಗ್ಗೆ ಚರ್ಚೆ ಮಾಡಿ, ನಿಮ್ಮ ಸಂಸ್ಕೃತಿ ಬೇರೆಯವರು ಅಳವಡಿಸುವಂತಾಗಲಿ. ಬಂಟರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇತ್ತು. ಮುಂದಿನ ಬಜೆಟ್ ಮಂಡಿಸುವಾಗ ಬಂಟ ನಿಗಮ ಘೋಷಣೆ ಮಾಡುತ್ತೇನೆ, ಬಂಟರ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭಕೋರಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ 14 ಕೋಟಿ ಹಗರಣ ಬಗ್ಗೆ ಮಾಹಿತಿಗಳು ಬಂದಿದೆ. ಹಗರಣ ಆಗಿದ್ದರೆ ನಾವು ತನಿಖೆ ಮಾಡಿಸುತ್ತೇವೆ,ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಕುರಿತು ತನಿಖೆ ನಡೆಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.

ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ಆಫರ್ ವಿಚಾರ
ಆ ವಿಚಾರವನ್ನು ರವಿ ಗಾಣಿಗ ಬಳಿಯೇ ಕೇಳಿ,‌ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವುದು ನಿಜ. ಬಿಜೆಪಿಯವರು ಈ ಪ್ರಯತ್ನದಲ್ಲಿ ಸಫಲ ಆಗಲ್ಲ, ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಒಮ್ಮೆ ಆಪರೇಷನ್ ಕಮಲ ಮಾಡಿ ಸಕ್ಸಸ್ ಆಗಿರಬಹುದು, ಆದರೆ ಯಾವಾಗಲೂ ಹಾಗೆ ಆಗಲ್ಲ ವಿಫಲ ಪ್ರಯತ್ನವಾಗಿದೆ. ಬಿಜೆಪಿಯವರಿಗೆ ಅಧಿಕಾರದ ದಾಹ, ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ. ನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗಲ್ಲ ಎಂದರು.

ರಾಮನಗರ ಬೆಂಗಳೂರು ಸೇರ್ಪಡೆ ವಿಚಾರವಾಗಿ ನನ್ನ ಜೊತೆ, ಯಾರು ಚರ್ಚೆ ಮಾಡಿಲ್ಲ, ಸರಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!