ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5 – 8ನೇ ತರಗತಿಗಳಿಗೂ ವಾರ್ಷಿಕ ಪರೀಕ್ಷೆ: ಶಿಕ್ಷಣ ಇಲಾಖೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಇನ್ಮುಂದೆ 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಮೌಲ್ಯಾಂಕನ ಪರೀಕ್ಷೆ ಹೆಸರಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕೆಯಲ್ಲಿ ಚೇತರಿಕೆ ಮೂಡಿಸಲು ಈ ನಿರ್ಧಾರ ಮಾಡಿದೆ.

ರೀಕ್ಷೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ವಹಿಸಲಿದೆ. ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವ ರೀತಿ ಇದೆ ಎಂಬುದನ್ನು ಅಳೆಯಲು ಈ ವಾರ್ಷಿಕ ಪರೀಕ್ಷೆ ಮಾಡಲಾಗ್ತಿದೆ.

ಇಲ್ಲಿ ಯಾವುದೇ ವಿದ್ಯಾರ್ಥಿಗಳನ್ನ ಫೇಲ್ ಮಾಡೋದಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯೋ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆ ಗುಣಮಟ್ಟ ಏನು? ಕೊರತೆಗಳೇನು? ಯಾವ ವಿಷಯಗಳಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯಲು ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಎಲ್ಲಾ ಶಾಲಾ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಕಲಿಕಾ- ಫಲಗಳು, ಸಾಮರ್ಥ್ಯಗಳನ್ನಾಧರಿಸಿದ ಏಕರೂಪದ ಸಾಧನಾ ಮತ್ತು ತಂತ್ರ ಬಳಸಿ ಮೌಲ್ಯಮಾಪನ ಮಾಡಿ ವಿಶ್ಲೇಶಿಸುವ ಅವಶ್ಯತೆಯಿದೆ. ಶಾಲಾ ಹಂತದಲ್ಲಿ ಪರೀಕ್ಷೆ ನಿರ್ವಹಿಸಿ, ಮೌಲ್ಯಾಂಕನ ವಿಶ್ಲೇಷಣೆ ಮಾಡಿ ಕಲಿಕಾ ಪ್ರಗತಿ ಕುಂಠಿತವಾಗಿರುವ ವಿಷಯವಾರು, ಶಾಲಾವಾರು, ಕ್ಲಸ್ಟರ್, ತಾಲೂಕು ವಾರು ವಿಶ್ಲೇಷಿಸಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಗತ್ಯ ಕ್ರಿಯಾ ಯೋಜನೆ ರೂಪಿಸಿ, ಬೋಧನಾ- ಕಲಿಕಾ ಪ್ರಕ್ರಿಯೆ ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದ್ದು, ಪರೀಕ್ಷಾ ನಿರ್ವಹಣೆಗೆ ಅಗತ್ಯ ಪೂರ್ಣ ಸಿದ್ಧತೆ ಕೈಗೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಿ ಆದೇಶ ಹೊರಡಿಸಲಾಗಿದೆ.

2022-23ನೇ ಸಾಲಿನ ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರ ಆದೇಶಿಸಿದೆ.

ಶಾಲಾವಾರು ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಲಭ್ಯವಾಗುವಂತೆ, ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ. ಮೀ ವ್ಯಾಪ್ತಿಯ ಅಗತ್ಯ ಮೂಲಭೂತ ಸೌಲಭ್ಯ ಹೊಂದಿರುವ ಕಿರಿಯ/ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸುವಂತೆ ತಿಳಿಸಲಾಗಿದೆ. 8ನೇ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 50 ಮಕ್ಕಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಸ್ಥಾಪಿಸುವುದು, ಒಂದು ವೇಳೆ ಮಕ್ಕಳ ಸಂಖ್ಯೆ ಕಡಿಮೆಯಿದ್ದಲ್ಲಿ, ಕನಿಷ್ಠ 2 ಕಿ. ಮೀ ವ್ಯಾಪ್ತಿಯ ಸಮೀಪದ ಶಾಲೆಗಳಿಗೆ ಲಗತ್ತಿಸುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!