ಹೊಸದಿಗಂತ ವರದಿ ತುಮಕೂರು:
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಕಬಡ್ಡಿ ತಂಡ ಆಯ್ಕೆ ಸಂದರ್ಭದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ನಗರ ಠಾಣೆಯ ಪೊಲೀಸರ ನಡುವೆ ತೀವ್ರ ರೀತಿಯ ಕಿತ್ತಾಟ ನಡೆದಿದೆ.
ಪ್ರತಿ ಬಾರಿಯೂ ಕ್ರೀಡಾಕೂಟದ ಸಂದರ್ಭದಲ್ಲಿ ಪೊಲೀಸರ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದು ಆದರೆ ಈ ಬಾರಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ನಗರ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಗೆ ಕೈ ಬೆರಳು ಮುರಿದಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ವೈಯಕ್ತಿಕ ದ್ವೇಷದ ಹಿನ್ನೆಲೆ ಗಲಾಟೆ ಅತಿರೇಕಕ್ಕೆ ಹೋದಾಗ ಬಿಡಿಸಲು ಹೋದ ಪೊಲೀಸ್ ಅಧಿಕಾರಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಇದನ್ನು ಗಮನಿಸುತ್ತಿದ್ದ ಪೊಲೀಸ್ ವರಿಷ್ಠಾಧಿಕಾರಿ ಗಲಾಟೆ ನಡೆಸುವ ಪೋಲಿಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದಾಗ ಕಿತ್ತಾಟ ಶಾಂತವಾಗಿದೆ.
ಸೋಮವಾರ ಕ್ರೀಡಾಕೂಟ ಆರಂಭವಾಗಿದ್ದು ಕ್ರೀಡೆಯ ಸಂದರ್ಭದಲ್ಲಿ ಪೊಲೀಸರು ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆಗಳು, ಮಧುಗಿರಿ ಡಿ ವೈ ಎಸ್ ಪಿ ರಾಸಲೀಲೆ, ಪೋಲಿಸ್ ಇಲಾಖೆಯ ಆಂತರಿಕ ಕಿತ್ತಾಟ ಹೀಗೆ ನಾನಾ ರೀತಿಯ ಸಮಸ್ಯೆಗಳು ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ.