ಹೊಸದಿಂತ ವರದಿ,ಮೈಸೂರು:
ರಾಜ್ಯದಲ್ಲಿ ಹಿಂದಿ, ಸಂಸ್ಕೃತ ಭಾಷೆಯ ಏರಿಕೆ ಮಾಡಲಾಗುತ್ತದೆ ಎಂದು ಆರೋಪಿಸಿ, ವಿರೋಧ ವ್ಯಕ್ತಪಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ನಾಡಿನ ಭಾಷೆ, ಸಂಸ್ಕೃತಿ, ಪರಂಪರೆಯ ಅಸ್ಮಿತೆಯಾದ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಉರ್ದು ಭಾಷೆಯ ಸಂಸ್ಕೃತಿಯನ್ನು ಹೇರುತ್ತಿದೆ !
ಈ ಬಾರಿ ಬರಗಾಲದ ಕಾರಣದಿಂದ ಸರ್ಕಾರ ಸಾಂಪ್ರದಾಯಕ ದಸರಾವನ್ನು ಆಚರಿಸುತ್ತಿದೆ. ಅ. 17 ರಿಂದ 21 ರವರೆಗೆ ಮೈಸೂರಿನ ವಿವಿಧ ವೇದಿಕೆಗಳಲ್ಲಿ ದಸರಾ ಕವಿಗೋಷ್ಠಿ ನಡೆಸಲಾಗುತ್ತದೆ. ಚಿಗುರು ಕವಿಗೋಷ್ಠಿ, ಯುವ ಕವಿಗೋಷ್ಠಿ, ಪ್ರಾದೇಶಿಕ ಕವಿಗೋಷ್ಠಿ ಮತ್ತು ಮಹಿಳಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಅಲ್ಲದೆ ಉರ್ದು ಕವಿಗೋಷ್ಠಿಯನ್ನೂ ಆಯೋಜಿಸುವ ಮೂಲಕ ಮತ್ತೊಂದು ವಿವಾದವನ್ನುಂಟು ಮಾಡಿದೆ. ಈಗಾಗಲೇ ದಸರಾದಲ್ಲಿ ಸ್ಟ್ರೀಟ್ ಫೆಸ್ಟಿವೆಲ್ ಎಂಬ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮತ್ತೆ ತರಲು ಪ್ರಯತ್ನ ನಡೆಸಿರುವ ಸರ್ಕಾರ ಇದೀಗ ಎರಡನೇ ವಿವಾದವಾಗಿ ಉರ್ದು ಭಾಷೆಯ ಸಂಸ್ಕೃತಿಯನ್ನು ಕವಿಗೋಷ್ಠಿಯ ಮೂಲಕ ತರುತ್ತಿದೆ. ಇದಕ್ಕೆ ಬಿಜೆಪಿ ಶಾಸಕ ವಿ ಸುನಿಲ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು “ನಾಡಹಬ್ಬ ದಸರಾದಲ್ಲಿ ರಾಜ್ಯ ಸರ್ಕಾರ ಉರ್ದು ಕವಿಗೋಷ್ಠಿ ಆಯೋಜಿಸಿದೆ. ಕನ್ನಡದ ಶ್ರೀಮಂತ ಸಂಸ್ಕçತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ದಸರಾದಲ್ಲಿ ಉರ್ದು ಹೇರಿಕೆ ಏಕೆ ? ತನ್ನ ಮತ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್ ಕನ್ನಡದ ಮೇಲೆ ಉರ್ದು ಹೇರುತ್ತಿದೆ” ಎಂದು ವಾಗ್ದಾಳಿ ಮಾಡಿದ್ದಾರೆ.
`ಟಿಪ್ಪು ನಿಜಗನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ಮಹಿಷ ದಸರಾ, ಉರ್ದು ಕವಿಗೋಷ್ಠಿ ಜತೆಗೆ ಇನ್ನೆಷ್ಟು ಸಾಂಸ್ಕçತಿಕ ದೌರ್ಜನ್ಯಕ್ಕೆ ನಿಮ್ಮ ಸಹಮತ ? ದಸರಾದಲ್ಲಿ ನಾಡದೇವಿ ಚಾಮುಂಡಿ ಹಾಗೂ ಮೈಸೂರು ಒಡೆಯರ್ ಅವರ ವೈಭವವಾಗಬೇಕೇ ವಿನಾ ಟಿಪ್ಪು ಸಂಸ್ಕೃತಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಸೂಕ್ಷ÷್ಮತೆ ಹಾಗೂ ಜವಾಬ್ದಾರಿಯನ್ನು ಮರೆತಂತೆ ಕಾಣುತ್ತಿದೆ. ವರ್ಷಪೂರ್ತಿ ಕರ್ನಾಟಕ ಸಂಭ್ರಮ ಆಚರಿಸಲು ಹೊರಟವರು ದಸರಾದಲ್ಲಿ ಉರ್ದು ಸಂಭ್ರಮ ನಡೆಸಿದರೆ ಹೇಗೆ ?” ಎಂದು ಪ್ರಶ್ನಿಸಿದ್ದಾರೆ.
ದಸರಾದಲ್ಲಿ ಹಿಂದಿ ಕವಿಗೋಷ್ಠಿಗೆ ವಿರೋಧಿಸಿದ್ದ ಕಾಂಗ್ರೆಸ್
2022ರಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮೈಸೂರು ದಸರಾದ ಕವಿಗೋಷ್ಠಿಯಲ್ಲಿ ಹಿಂದಿ ಕವಿಗೋಷ್ಠಿಯನ್ನೂ ಆಯೋಜಿಸಿತ್ತು. ಇದಕ್ಕೆ ಕನ್ನಡಪರ ಸಂಘಟನೆಗಳು ಮತ್ತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. “ಹಿಂದಿ ಭಾಷೆ ಹೇರುವ ಕೇಂದ್ರ ಸರ್ಕಾರದ ಯಾವುದೇ ಕ್ರಮವನ್ನು ವಿರೋಧಿಸುತ್ತೇವೆ. ಹಿಂದಿಯೇತರ ರಾಜ್ಯಗಳು ಮತ್ತು ಜನರ ಮೇಲೆ ಪರೋಕ್ಷವಾಗಿ ಹಿಂದಿ ಹೇರಲಾಗುತ್ತಿದೆ” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಕಾಂಗ್ರೆಸ್ ಸರ್ಕಾರವಿದ್ದು, ದಸರಾದಲ್ಲಿ ಉರ್ದು ಕವಿಗೋಷ್ಠಿ ನಡೆಸಲು ಮುಂದಾಗಿದೆ. ಇದಕ್ಕೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಕನ್ನಡ ನಾಡಿನಲ್ಲಿ ಉರ್ದು ಸಂಸ್ಕೃತಿಯನ್ನು ಹೇರುವ ಪ್ರಯತ್ನ ನಡೆಸುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.