ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆಯ ಪ್ರಕರಣ ದಾಖಲಾಗಿದೆ. ನವೆಂಬರ್ 21ರಂದು ವಿಮಾನ ಆಗಮನ ವಿಭಾಗದಲ್ಲಿ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ಕಸ್ಟಮರ್ ಸರ್ವಿಸ್ ವಿಭಾಗದ ಇಮೇಲ್‌ಗೆ ಬಂದಿದ್ದರಿಂದ ಕ್ಷಣಾರ್ಧದಲ್ಲೇ ಭದ್ರತಾ ಸಿಬ್ಬಂದಿ ಎಚ್ಚರಕ್ಕೆ ಬಂದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳಗಳನ್ನು ಕರೆಸಿ ವಿಮಾನ ನಿಲ್ದಾಣದ ಒಳಹೊರಗೆ ಸಂಪೂರ್ಣ ತಪಾಸಣೆ ನಡೆಸಲಾಯಿತು.
ಪ್ರಯಾಣಿಕರು ಹಾಗೂ ಸಿಬ್ಬಂದಿ ಎಲ್ಲರಿಗೂ ಕಡ್ಡಾಯವಾಗಿ ಭದ್ರತಾ ತಪಾಸಣೆ ಮಾಡಲಾಗಿದ್ದು, ಆದರೆ ಯಾವುದೇ ಸ್ಫೋಟಕ ಪತ್ತೆಯಾಗದೆ ಇದು ಮತ್ತೊಬ್ಬ ಕಿಡಿಗೇಡಿಯ ಹುಸಿ ಬೆದರಿಕೆ ಎಂದು ಪೊಲೀಸರು ದೃಢಪಡಿಸಿದರು.
ಇಮೇಲ್ ಮೂಲ, ಕಳುಹಿಸಿದವರ ಉದ್ದೇಶ ಸೇರಿದಂತೆ ತಾಂತ್ರಿಕ ಪರಿಶೀಲನೆ ನಡೆಯುತ್ತಿದ್ದು, ನಿಜವಾಗಿಯೂ ದುರಾಲೋಚನೆ ಇತ್ತಾ ಅಥವಾ ಕೇವಲ ಅಸ್ಥಿರತೆ ಸೃಷ್ಟಿಸುವ ಹುನ್ನಾರವೇ ಎಂಬುದು ಶೋಧನೆಯಲ್ಲಿದೆ. ಕೆಲ ದಿನಗಳ ಹಿಂದೆ ಇದೇ ಏರ್‌ಪೋರ್ಟ್‌ಗೆ ಬಂದಿದ್ದ ಇಂತಹ ಮತ್ತೊಂದು ಬೆದರಿಕೆಯೂ ಸುಳ್ಳು ಎಂದು ಪತ್ತೆಯಾಗಿತ್ತು. ಒಂದು ವಾರದೊಳಗೆ ಎರಡನೇ ಬಾರಿ ಈ ರೀತಿಯ ಬೆದರಿಕೆ ಬಂದಿರುವುದು ಭದ್ರತಾ ಇಲಾಖೆಯಲ್ಲಿ ಆತಂಕ ಮೂಡಿಸಿದೆ.

