ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಆಘಾತ ತಟ್ಟಿದೆ. ವಿನೇಶ್ ಫೋಗಟ್ ಅನರ್ಹಗೊಂಡ ಬಳಿಕ ಇದೀಗ ಮತ್ತೊಬ್ಬರು ಭಾರತೀಯ ಕುಸ್ತಿಪಟುವನ್ನು ಪ್ಯಾರಿಸ್‌ನಿಂದ ಗಡಿಪಾರು ಮಾಡಲು ನಿರ್ಧರಿಸಲಾಗಿದೆ.
ಭಾರತೀಯ ಕುಸ್ತಿಪಟು ಅಂತಿಮ್ ಪಂಘಲ್ ಅವರು ತಮ್ಮ ಮಾನ್ಯತಾ ಗುರುತಿನ ಚೀಟಿಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗಾಗಿ ಅಶಿಸ್ತಿನ ವರ್ತನೆ ಮೇರೆಗೆ ಅವರನ್ನು ಗಡಿಪಾರು ಮಾಡಲು ಪ್ಯಾರಿಸ್ ಒಲಿಂಪಿಕ್ಸ್ ಸಮಿತಿ ನಿರ್ಧರಿಸಿದೆ .
ಇದಕ್ಕೂ ಮುನ್ನ ಬುಧವಾರ ನಡೆದ 53 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಅಂತಿಮ್ ಪಂಘಲ್ ಟರ್ಕಿಯ ಯೆಟ್‌ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.
ಒಲಿಂಪಿಕ್ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಲು ಅಂತಿಮ್‌ಗೆ ನೀಡಲಾಗಿದ್ದ ಆಧಿಕೃತ ಐಡಿ ಕಾರ್ಡ್ ಅನ್ನು ತನ್ನ ಸಹೋದರಿ ನಿಶಾ ಅವರಿಗೆ ನೀಡಿದ್ದಾರೆ. ನಿಯಮದ ಪ್ರಕಾರ ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಟಗಾರರಲ್ಲದವರು ಪ್ರವೇಶಿಸುವಂತಿಲ್ಲ. ಹೀಗಾಗಿ ಅಂತಿಮ್ ಅವರನ್ನು ಒಲಿಂಪಿಕ್ಸ್ ಗ್ರಾಮದಿಂದ ಗಡಿಪಾರು ಮಾಡಲು ಒಲಿಂಪಿಕ್ಸ್ ಸಮಿತಿ ಅಧಿಕಾರಿಗಳು ನಿರ್ಧರಿಸಿದ್ದಾರೆ .
ಅಂತಿಮ್ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಸೋತ ನಂತರ ಗೇಮ್ಸ್ ವಿಲೇಜ್ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಅವರು ತನ್ನ ಅಧಿಕೃತ ಐಡಿ ಕಾರ್ಡ್ (Olympics ID Card) ಅನ್ನು ಸಹೋದರಿ ನಿಶಾ ಅವರಿಗೆ ನೀಡಿ ಗೇಮ್ಸ್ ವಿಲೇಜ್‌ಗೆ ತೆರಳಿ ಬ್ಯಾಗ್ ತರುವಂತೆ ಸೂಚಿಸಿದ್ದರು. ಅದರಂತೆ ಗೇಮ್ಸ್ ವಿಲೇಜ್‌ನಿಂದ ಹೊರ ಬರುತ್ತಿದ್ದಾಗ ನಿಶಾ ಭದ್ರತಾ ಸಿಬ್ಬಂದಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಪಂಘಲ್ ಅವರ ಇಡೀ ಪರಿವಾರವನ್ನೇ ಗಡೀಪಾರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.