September 13, 2026
Sunday, September 13, 2026
spot_img

ಬಿಸಿಸಿಐ ಮುಡಿಗೆ ಮತ್ತೊಂದು ಜಾಗತಿಕ ಗರಿ: 2027ರ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಭಾರತವೇ ಆತಿಥ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. 2027 ರ ಪ್ರಪ್ರಥಮ ಐಸಿಸಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಜಾಗತಿಕ ಆತಿಥ್ಯದ ಜವಾಬ್ದಾರಿಯನ್ನು ಭಾರತ ಮುಡಿಗೇರಿಸಿಕೊಂಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ಈ ಮಹತ್ವದ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದೆ. ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಐತಿಹಾಸಿಕ ಟೂರ್ನಿಯು 2027 ರ ಫೆಬ್ರವರಿ 14 ರಿಂದ 28 ರವರೆಗೆ ಭಾರತದ ಮುಂಬೈ ಮತ್ತು ವಡೋದರಾ ನಗರಗಳಲ್ಲಿ ಜರುಗಲಿದೆ.

ಶ್ರೀಲಂಕಾದಿಂದ ಭಾರತಕ್ಕೆ ಬದಲಾದ ವೇದಿಕೆ

ಈ ಚೊಚ್ಚಲ ಟೂರ್ನಿಯನ್ನು ಮೊದಲು ಶ್ರೀಲಂಕಾದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಐಸಿಸಿ ನಿಯಮಗಳ ಗೊಂದಲದ ಹಿನ್ನೆಲೆಯಲ್ಲಿ ಅಲ್ಲಿಂದ ಆತಿಥ್ಯದ ಹಕ್ಕನ್ನು ಹಿಂಪಡೆಯಲಾಗಿದೆ. ನಂತರ ಐಸಿಸಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ಪರಿಶೀಲನೆ ನಡೆಸಿ, ಅಂತಿಮವಾಗಿ ಭಾರತವನ್ನು ಆತಿಥೇಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಿದೆ.

ಪಾಕಿಸ್ತಾನಕ್ಕಿಲ್ಲ ಸ್ಥಾನ

ಈ ಚೊಚ್ಚಲ ಟಿ20 ಮಾದರಿಯ ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಜುಲೈ 6ರ ಕಟ್-ಆಫ್ ದಿನಾಂಕದ ಐಸಿಸಿ ಟಿ20 ರ‍್ಯಾಂಕಿಂಗ್ ಆಧಾರದ ಮೇಲೆ ತಂಡಗಳು ಅರ್ಹತೆ ಪಡೆದಿದ್ದು, ಕಳಪೆ ರ‍್ಯಾಂಕಿಂಗ್ ಕಾರಣದಿಂದಾಗಿ ಪಾಕಿಸ್ತಾನ ತಂಡ ಈ ಪ್ರತಿಷ್ಠಿತ ಟೂರ್ನಿಯಿಂದ ಹೊರಬಿದ್ದಿದೆ. ಏಷ್ಯಾದಿಂದ ಭಾರತ ಹಾಗೂ ಶ್ರೀಲಂಕಾ ಮಾತ್ರ ಭಾಗವಹಿಸುತ್ತಿವೆ.

ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿಯಾಗಲಿರುವ ಸ್ಟೇಡಿಯಂ

ಮುಂಬೈನ ಪ್ರಸಿದ್ಧ ‘ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ’ (CCI) ಮತ್ತು ವಡೋದರಾದ ಅತ್ಯಾಧುನಿಕ ‘ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ’ ಈ ಐತಿಹಾಸಿಕ ಪಂದ್ಯಗಳಿಗೆ ಸಾಕ್ಷಿಯಾಗಲಿವೆ. ಟೂರ್ನಿಯಲ್ಲಿ ಪ್ರತಿ ತಂಡವು ಉಳಿದ ಐದೂ ತಂಡಗಳ ಎದುರು ತಲಾ ಒಂದೊಂದು ಪಂದ್ಯವನ್ನು ಆಡಬೇಕಾಗುತ್ತದೆ. ಲೀಗ್ ಹಂತದ ಮುಕ್ತಾಯದ ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಟಾಪ್-2 ತಂಡಗಳು ಫೆಬ್ರವರಿ 28ರಂದು ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಜೈ ಶಾ ಹೇಳಿದ್ದೇನು?

ಮಹಿಳಾ ಕ್ರಿಕೆಟ್‌ನಲ್ಲಿ ಪ್ರತಿ ವರ್ಷ ಇಂತಹ ದೊಡ್ಡ ಐಸಿಸಿ ಟೂರ್ನಿಯನ್ನು ಆಯೋಜಿಸುವುದು ಜಾಗತಿಕವಾಗಿ ಈ ಆಟದ ಕ್ರೇಜ್ ಹಾಗೂ ಆಟಗಾರರ ಬೆಳವಣಿಗೆಗೆ ದೊಡ್ಡ ವೇಗ ನೀಡಲಿದೆ ಎಂದು ಐಸಿಸಿ ಅಧ್ಯಕ್ಷ ಜೈ ಶಾ ಸಂತಸ ವ್ಯಕ್ತಪಡಿಸಿದ್ದಾರೆ. 2023ರ ಪುರುಷರ ಏಕದಿನ ವಿಶ್ವಕಪ್ ಹಾಗೂ 2025ರ ಮಹಿಳಾ ವಿಶ್ವಕಪ್ ಬೆನ್ನಲ್ಲೇ ಭಾರತಕ್ಕೆ ಸಿಗುತ್ತಿರುವ 4ನೇ ಅತಿದೊಡ್ಡ ಐಸಿಸಿ ಟೂರ್ನಿ ಇದಾಗಿದ್ದು, ಬಿಸಿಸಿಐ ಈಗಾಗಲೇ ಇದರ ಯಶಸ್ಸಿಗಾಗಿ ಸಿದ್ಧತೆಗಳನ್ನು ಆರಂಭಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !