ಹೊಸದಿಗಂತ ವರದಿ,ಮೈಸೂರು:
ಸ್ನಾತಕ-ಸ್ನಾತಕೋತ್ತರ ಪದವಿಗಳ ವ್ಯಾಸಂಗವನ್ನು ಪೂರೈಸಿ ವ್ಯಾಸಂಗದ ಎರಡು ಪಟ್ಟು ಅವಧಿಯ ನಂತರವೂ ಅನುತ್ತೀರ್ಣಗೊಂಡಿರುವoತಹ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಬರೆಯಲು ಮತ್ತೊಂದು ಅವಕಾಶ ನೀಡಲು ಶುಕ್ರವಾರ ನಡೆದ ಮೈಸೂರು ವಿಶ್ವವಿದ್ಯಾಲಯದ ಮೊದಲನೇ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಸಭೆಯಲ್ಲಿ ನಿರ್ಧರಿಸಲಾಯಿತು.
ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಾರ್ಷಿಕ ಹಾಗೂ ಸೆಮಿಸ್ಟರ್ ಪದ್ಧತಿ ಕೋರ್ಸ್ಗಳು ಬಿ.ಎಡ್ ಹಾಗೂ ಕಾನೂನು ಪದವಿಯ ಆರ್‌ಆರ್,ಸಿಎಸ್‌ಎಸ್ ಮತ್ತು ಐಎಸ್‌ಎಸ್ ಸ್ಕೀಂ ಸೇರಿದಂತೆ ಮತ್ತು ಡಿಪ್ಲೋಮಾ ಸ್ನಾತಕೋತ್ತರ ಎಲ್ಲಾ ಕೋರ್ಸ್ಗಳಿಗೆ ಅನ್ವಯವಾಗುವಂತೆ ಹಳೆಯ ಪಠ್ಯಕ್ರಮದ ರೀತಿಯಲ್ಲೇ ಪರೀಕ್ಷೆ ಬರೆಯಲು ಒಪ್ಪಿಗೆ ಸೂಚಿಸಲಾಯಿತು.
ಇದಲ್ಲದೆ, ಮತ್ತೊಂದು ಬಾರಿಗೆ ಪರೀಕ್ಷೆಗೆ ಅವಕಾಶ ಇಲ್ಲದ ಷರತ್ತು ವಿಧಿಸಿ ಅನುಮತಿ ಕೋಡಲು ಸಭೆಯಲ್ಲಿ ಸಮ್ಮತಿಸಲಾಯಿತು.
ವಿಷಯ ಮುಂದೂಡಿಕೆ: ವಿವಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಲ್ಲಿ ನಡೆಯುವ 2,4 ಮತ್ತು 6ನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ವಿಕೇಂದ್ರೀಕರಣಗೊಳಿಸಿ ಆನ್‌ಲೈನ್ ಮೂಲಕ ಮೌಲ್ಯಮಾಪನ ಮಾಡಿಸುವ ವಿಷಯವನ್ನು ಮಂಡಿಸಲಾಯಿತ್ತಾದರೂ ಹೆಚ್ಚಿನ ಮಾಹಿತಿಯೊಂದಿಗೆ ಮಂಡಿಸುವoತೆ ಹೇಳಿ ಮುಂದೂಡಲಾಯಿತು.
ಆನ್‌ಲೈನ್ ಪರೀಕ್ಷೆಯಿಂದ 5ಕೋಟಿ ರೂ. ಹೆಚ್ಚು ಹಣ ಉಳಿತಾಯವಾಗಬಹುದೆಂದು ಹೇಳಲಾಗಿದೆ. ಆದರೆ, ಇದರಿಂದ ಅನುಕೂಲಕ್ಕಿಂತ ಅನಾನುಕೂಲ ಜಾಸ್ತಿಯಾಗಲಿದೆ. ಕಂಪ್ಯೂಟರ್‌ಗೂ ಬಂಡವಾಳ ಹಾಕಬೇಕಿರುತ್ತದೆ. ಈ ವಿಚಾರದಲ್ಲಿ ಮತ್ತೊಮ್ಮೆ ಮಾಹಿತಿ ಪಡೆದು ಸಮಗ್ರವಾಗಿಮಂಡಿಸುವoತೆ ಹೇಳಿ ಕುಲಪತಿಗಳು ವಿಷಯ ಮುಂದೂಡಿದರು.
ಈ ವೇಳೆ ಸದಸ್ಯರೊಬ್ಬರು ಮಾತನಾಡಿ, ದಿನಕ್ಕೆ 30ಪೇಪರ್ ಮೌಲ್ಯಮಾಪನ ಮಾಡುತ್ತಿದ್ದು,ಹೆಚ್ಚುವರಿ ಪೇಪರ್ ಕೊಟ್ಟರೆ ಮೌಲ್ಯಮಾಪಕರು ಮತ್ತು ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರಲಿದೆ. ಗುಣಮಟ್ಟದಿಂದ ಮೌಲ್ಯಮಾಪನ ನಡೆಯಲ್ಲ. ಆನ್‌ಲೈನ್‌ನಿಂದ ನಾನಾ ಕಾರಣಹೇಳಿ ವಿಳಂಬಕ್ಕೂ ದಾರಿಯಾಗಲಿದೆ ಎಂದರು. ವಿವಿಯ 2022-23ನೇ ಸಾಲಿನ ವಾರ್ಷಿಕ ವರದಿಯ ಪರಿಶೀಲನೆ ನಡೆಸುವ ಮತ್ತು ಅನುಮೋದನೆಗೆ ಒಪ್ಪಿಗೆ ನೀಡಲಾಯಿತು. ನಂತರ,ಕುಲಸಚಿವರು ಮಂಡಿಸಿದ ಹಲವಾರು ವಿಷಯಗಳಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು.
ಕುಲಸಚಿವರಾದ ವಿ.ಆರ್,ಶೈಲಜ,ಪ್ರೊ.ಮಹಾದೇವನ್, ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಸಭೆಯಲ್ಲಿ ಉಪಸ್ಥಿತರಿದ್ದರು.