ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮತ್ತೊಮ್ಮೆ ಕರ್ನಾಟಕಕ್ಕೆ ಹಿನ್ನೆಡೆಯಾಗಿದ್ದು, ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಕರ್ನಾಟಕಕ್ಕೆ ಆದೇಶ ಹೊರಡಿಸಿದೆ.
ದೆಹಲಿಯ CWMA ಕಚೇರಿಯಲ್ಲಿ ಇಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಹಲವು ಚರ್ಚೆಗಳು ನಡೆದ ನಂತರ ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕ ಸರ್ಕಾರಕ್ಕೆ CWMA ಆದೇಶ ನೀಡಿದೆ. ಸೆಪ್ಟೆಂಬರ್ 12 ರ ಆದೇಶವನ್ನೇ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಕೇವಲ 3 ಸಾವಿರ ಕ್ಯೂಸೆಕ್ ನೀರು ಬಿಡುವುದರಿಂದ ಭತ್ತದ ಬೆಳೆ ಹಾಳಾಗುತ್ತವೆ ಅದರಿಂದ ಹೆಚ್ಚುವರಿ ನೀರು ಬಿಡುವಂತೆ ತಮಿಳುನಾಡು ಮನವಿ ಸಲ್ಲಿಸಿತ್ತು.
ಸೆಪ್ಟೆಂಬರ್ 15 ರಂದು ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ಸೂಚಿಸಲಾಗಿತ್ತು. ಹೀಗಾಗಿ ಸಮಿತಿಯ ಈ ಆದೇಶವನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿತ್ತು. ಆದರೀಗ ಇಂದಿನ ಸಭೆಯಲ್ಲೂ ಕೂಡ ತಮಿಳುನಾಡಿಗೆ ನೀರು ಬಿಡಲು ಸೂಚನೆ ನೀಡಲಾಗಿದೆ.