ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಯ ಈ ಕ್ಷಣ ಜನತೆಗೆ ಸಿಹಿ ಸುದ್ದಿ ನೀಡಿದೆ. ಕಳೆದ ಕೆಲವು ದಿನಗಳಿಂದ 200ರ ಗಡಿ ತಲುಪಿದ ಟೊಮೆಟೊ ಬೆಲೆ ಇದೀಗ ಪ್ರತಿ ಕೆಜಿಗೆ 50 ರೂಪಾಯಿ ಬೆಲೆಯನ್ನು ಸರ್ಕಾರ ನಿಗದಿ ಮಾಡಿದೆ.
ಹಣದುಬ್ಬರ ಇಳಿಯದ ಕಾರಣ ರೇಪೋ ಬಡ್ಡಿದರವನ್ನು ಶೇ.6.5ರಲ್ಲೇ ಮುಂದುವರಿಸುವುದಾಗಿ ಆರ್‌ಸಿಬಿ ಘೋಷಿಸಿತ್ತು. ಇದರ ಬೆನ್ನಲ್ಲೇ ಆಗಸ್ಟ್ ತಿಂಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗುವ ಆತಂಕ ಎದುರಾಗಿತ್ತು. ಆದರೆ ಆಗಸ್ಟ್ ತಿಂಗಳ ಆರಂಭದಿಂದಲೇ ಟೊಮೆಟೋ ಬೆಲೆ ಇಳಿಕೆಯಾಗಲು ಆರಂಭಿಸಿತ್ತು. ಇದೀಗ 70 ರೂಪಾಯಿಂದ 50 ರೂಪಾಯಿಗೆ ಇಳಿಕೆಯಾಗಿದೆ.
ಹಣದುಬ್ಬರ, ಬೆಲೆ ಏರಿಕೆ ಮತ್ತು ಬೇಡಿಕೆಗಳನ್ನು ಪೂರೈಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಟೊಮೆಟೋ ಬೆಲೆ ನಿಯಂತ್ರಣಕ್ಕಾಗಿ ದೇಶಕ್ಕೆ ನೇಪಾಳದಿಂದ ಟೊಮೆಟೋ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.
ಟೊಮೆಟೋ ದರ ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿರುವ ಬೆನ್ನಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡ 1 ಕೆ.ಜಿ. ಟೊಮೆಟೋ ದರ 40ರಿಂದ 50 ರು.ಗಳಿಗೆ ಕುಸಿದಿದೆ. ಗುಣಮಟ್ಟದ ಟೊಮೆಟೋ 60 ರು.ಗಳಿಗೆ ಮಾರಾಟವಾಗುತ್ತಿದೆ. ಶುಭ ಸಮಾರಂಭ, ಮದುವೆ,ಮುಂಜಿ, ನಾಮಕಾರಣ ಮತ್ತಿತರ ಶುಭ ಕಾರ್ಯಗಳು ಜತೆಗೆ ವರಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ಹೀಗೆ ಸಾಲು ಸಾಲು ಹಬ್ಬಗಳ ಆಗಮನ ಆಗಲಿದ್ದು ಇದೀಗ ಟೊಮೆಟೋ ದರ ಕುಸಿತ ಒಂದು ರೀತಿ ಗ್ರಾಹಕರ ಮೊಗದಲ್ಲಿ ಸಂತಸ ತರಿಸಿದೆ.
ಟೊಮೆಟೋ ಬೆಲೆ ಇಳಿಕೆಯಾಗುತ್ತಿದ್ದಂತೆ ಈರುಳ್ಳಿ ಬೆಲೆ ಏರಿಕೆಯಾಗಲು ಆರಂಭವಾಗಿದ್ದು, ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಸಗಾಂವ್ ಎಪಿಎಂಸಿಯಲ್ಲಿ 1 ವಾರದಲ್ಲಿ ಈರುಳ್ಳಿ ಬೆಲೆ ಶೇ.48ರಷ್ಟುಏರಿಕೆಯಾಗಿದೆ. ಒಂದು ಕ್ಟಿಂಟಾಲ್ ಈರುಳ್ಳಿ ಬೆಲೆ 1,550ರಿಂದ 2,300ಕ್ಕೆ ಹೆಚ್ಚಳವಾಗಿದೆ. ಕಳೆದ 8 ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಗಟು ಮಾರಾಟ ಬೆಲೆ ಏರಿಕೆಯಾಗಿದೆ.