ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಮೈಸೂರಿನ ಟಿ. ನರಸೀಪುರದಲ್ಲಿರುವ ಫಾರ್ಮ್ ಹೌಸ್ನಲ್ಲಿ ನಾಲ್ಕು ಬಾರ್ ಹೆಡೆಡ್ ಗೂಸ್ (ವಿಶಿಷ್ಟ ಪ್ರಭೇದದ ಬಾತುಕೋಳಿ)ಗಳನ್ನು ಸಾಕಿದ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದರ್ಶನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎನ್ನಲಾಗಿದೆ.
ಅರಣ್ಯ ಇಲಾಖೆಯ ವಿಚಕ್ಷಣಾ ವಿಭಾಗದಿಂದ ಎಫ್ಐಆರ್ ದಾಖಲಿಸಲಾಗಿದೆ. ಐದು ನೊಟೀಸ್ ನೀಡಿದ್ದು, ಇದುವರೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿಲ್ಲ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ವನ್ಯಜೀವಿ ಧಾಮದಲ್ಲಿ ಖಾಸಗಿ ವಾಹನ ಬಳಕೆ ಬಳಕೆ, ಅರಣ್ಯ ಸಿಬ್ಬಂದಿ ಜತೆ ಬಾಡೂಟ, ಎಣ್ಣೆ ಪಾರ್ಟಿ ಮಾಡುವ ಮೂಲಕ ಅರಣ್ಯ ಮತ್ತು ವನ್ಯಜೀವಿ ಕಾಯ್ದೆ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅವರು ಕರ್ನಾಟಕ ರಾಜ್ಯ ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯೂ ಆಗಿದ್ದು, ಜಿಲ್ಲೆಯ ಮುತ್ತೋಡಿ, ಭದ್ರ ವನ್ಯಜೀವಿ ತಾಣದಲ್ಲಿ ಖಾಸಗಿ ವಾಹನ ಬಳಕೆ ಮಾಡಿದ್ದಾರೆ. ಅಲ್ಲದೇ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಸಿಬ್ಬಂದಿ ಜತೆ ಬಾಡೂಟ, ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ವನ್ಯಜೀವಿ ಧಾಮಗಳಿಗೆ ದರ್ಶನ್ ಭೇಟಿ ನೀಡಿದ ಫೋಟೋಗಳು ಸದ್ಯ ವೈರಲ್ ಆಗಿವೆ.
ಅರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಖಾಸಗಿ ಕಾರುಗಳ ಬಳಕೆ ನಿಷಿದ್ಧ. ಆದರೂ ದರ್ಶನ್ ಅವರಿಗೆ ಖಾಸಗಿ ವಾಹನ ಬಳಸಲು ಅನುಮತಿ ನೀಡಲಾಗಿದೆ ಎಂದು ಚಿಕ್ಕಮಗಳೂರಿನ ಅರಣ್ಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.