ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಮತ್ತೊಂದು ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದೆ.ಭಾನುವಾರ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿಸೇತುವೆಯೊಂದು ಕುಸಿದು ಬಿದ್ದಿದೆ. ಇದು ಇದೇ ವಾರದೊಳಗೆ ಸಂಭವಿಸಿದ ಮೂರನೇ ಘಟನೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋತಿಹಾರಿಯ ಘೋರಸಹಸ್ ಬ್ಲಾಕ್ ನಲ್ಲಿ ಈ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಂವಾ ಗ್ರಾಮ ಸೇರಿದಂತೆ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು 1.5ಕೋಟಿ ವೆಚ್ಚದಲ್ಲಿ 16 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗುತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇದು ಗಂಭೀರ ವಿಷಯವಾಗಿದ್ದು, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಡಬ್ಲ್ಯೂಡಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸೇತುವೆಯ ಕೆಲವು ಪಿಲ್ಲರ್‌ಗಳ ನಿರ್ಮಾಣಕ್ಕೆ ಸ್ಥಳೀಯರ ಒಂದು ಗುಂಪು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ವರದಿಗಳಿವೆ. ಪೊಲೀಸರು ಈ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.