ಹೊಸದಿಗಂತ ವರದಿ, ಮಂಗಳೂರು:
ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋಮು ಸಂಘರ್ಷ ತಡೆಯಲು ಹೊಸದಾಗಿ ಆಂಟಿ ಕಮ್ಯೂನಲ್ ಟಾಸ್ಕ್‌ಪೋರ್ಸ್ ರಚಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಾರ್ಕಳದಲ್ಲಿರುವ ನಕ್ಸಲ್ ವಿರೋಧಿ ಪಡೆ (ಎಎನ್‌ಎಫ್)ಮಾದರಿಯಲ್ಲಿ, ಉಭಯ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಪೊಲೀಸರ ಸಹಕಾರದೊಂದಿಗೆ ಆಂಟಿ ಕಮ್ಯೂನಲ್ ಟಾಸ್ಕ್‌ಪೋರ್ಸ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ. ಪೊಲೀಸರ ಜತೆ ಎಎನ್‌ಎಫ್ ಸಿಬ್ಬಂದಿಯೂ ಈ ಫೋರ್ಸ್‌ಗೆ ಸೇರ್ಪಡೆ ಆಗಲಿದ್ದಾರೆ. ಐಜಿ ದರ್ಜೆಯ ಅಧಿಕಾರಿಯೊಬ್ಬರು ನೇತೃತ್ವ ವಹಿಸಲಿದ್ದಾರೆ. ಕೋಮು ಸೌಹಾರ್ದಕ್ಕೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲು ಟಾಸ್ಕ್‌ಪೋರ್ಸ್‌ಗೆ ಎಲ್ಲ ರೀತಿಯ ಅಧಿಕಾರ ನೀಡಲಾಗುವುದು. ಪೊಲೀಸರಿಗಿಂತ ವಿಭಿನ್ನವಾಗಿ ಈ ಫೋರ್ಸ್ ಕೆಲಸ ಮಾಡಲಿದೆ. ಕೋಮು ಚಟುವಟಿಕೆ ಮಾಡುವವರು ಹಾಗೂ ಬೆಂಬಲಿಸುವವರ ವಿರುದ್ಧ ಈ ಫೋರ್ಸ್ ಕ್ರಮ ಕೈಗೊಳ್ಳಲಿದೆ. ಕಾನೂನು ಪ್ರಕಾರ ಈ ಪೋರ್ಸ್‌ಗೆ ಅಽಕಾರ ದತ್ತವಾಗಲಿದೆ. ಮುಂದಿನ ಎರಡು ವಾರದೊಳಗೆ ಈ ಬಗ್ಗೆ ಸ್ಪಷ್ಟ ರೂಪುರೇಖೆ ಪ್ರಕಟಿಸಲಾಗುವುದು ಎಂದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಹಲವಾರು ವರ್ಷಗಳಿಂದ ಕೋಮುಗಲಭೆ ಹಿನ್ನೆಲೆಯಲ್ಲಿ ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ. ಈ ಬಾರಿ ಕೊಲೆ ಘಟನೆ ನಡೆದ ಬಳಿಕ ಮತ್ತೆ ಕೋಮು ಸಂಘರ್ಷದ ಭಾವನೆ ಬಂದಿರಬಹುದು. ಆದರೆ, ಜನಸಮುದಾಯ ಇದನ್ನು ಇಷ್ಟಪಡುವುದಿಲ್ಲ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಕೋಮು ಗಲಭೆ ತಡೆಗೆ ಎಲ್ಲ ಕ್ರಮ ಕೈಗೊಂಡಿದ್ದೆವು. ಇದೀಗ ಮಂಗಳೂರಿನಲ್ಲಿ ನಡೆದ ಅಶ್ರಫ್ ಕೊಲೆ ಹಾಗೂ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಕೋಮು ಸೌಹಾರ್ದಕ್ಕೆ ಸವಾಲಾಗಿ ಪರಿಣಮಿಸಿದೆ. ಇಂತಹಾ ಘಟನೆಗಳು ಮುಂದಕ್ಕೆ ನಡೆಯಬಾರದು. ಈ ಭಾಗದಲ್ಲಿ ಶಾಂತಿ ನೆಲೆಸಬೇಕು ಎಂಬುದು ನಮ್ಮ ಉದ್ದೇಶ. ಯಾವುದೇ ಕಾರಣಕ್ಕೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಾಂತಿ, ಸೌಹಾರ್ದತೆ ಹಾಳು ಮಾಡಲು ದುಷ್ಟಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ. ಯಾವುದೇ ಸಮುದಾಯದ ಕೋಮು ಶಕ್ತಿಗಳು ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ. ಯಾವುದೇ ಕೋಮಿನ ವ್ಯಕ್ತಿ ಕಾನೂನು ಉಲ್ಲಂಘನೆ ಮಾಡಿದರೆ ನಿರ್ದಾಕ್ಷ್ಯಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಶಾಂತಿ, ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳ ಹುಟ್ಟಡಗಿಸುತ್ತೇವೆ ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾಽಕಾರಿ ಮುಲ್ಲೈ ಮುಗಿಲನ್, ಎಡಿಜಿಪಿ ಹಿತೇಂದ್ರ ಆರ್., ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಎಸ್‌ಪಿ ಯತೀಶ್ ಎನ್. ಉಪಸ್ಥಿತರಿದ್ದರು.