ಶಾಹೀನ್ ಭಾಗ್ ನಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ; ಸ್ಥಳೀಯರ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೆಹಲಿಯ ಶಾಹೀನ್ ಭಾಗ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಕೆಲ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಅಕ್ರಮ ಒತ್ತುವರಿ ತೆರವಿಗೆ ಬುಲ್ಡೋಜರ್‌, ಟ್ರಕ್ ಹಾಗೂ ಪೊಲೀಸರೊಂದಿಗೆ ಎಸ್‌ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತಲುಪಿದ ತಕ್ಷಣ ಮಹಿಳೆಯರು ಸೇರಿದಂತೆ ನೂರಾರು ಜನರು ಧರಣಿ ಆರಂಭಿಸಿದರು.
ಬಿಜೆಪಿ ಆಡಳಿತದಲ್ಲಿರುವ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದರು. ಎಸ್‌ಡಿಎಂಸಿಯ ಕೇಂದ್ರ ವಲಯದ ಅಡಿಯಲ್ಲಿ ಬರುವ ಶಾಹೀನ್ ಭಾಗ್, ಡಿಸೆಂಬರ್ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಮತ್ತು ಧರಣಿಗಳ ಕೇಂದ್ರವಾಗಿತ್ತು. 2020ರಲ್ಲಿ ಕೊರೋನಾ ಸಾಂಕ್ರಾಮಿಕ ತೀವ್ರವಾದಾಗ ಧರಣಿಯನ್ನು ಹಿಂಪಡೆಯಲಾಗಿತ್ತು. ಶಾಹಿನ್‌ ಬಾಗ್‌ ನಲ್ಲಿ ಇತ್ತೀಚೆಗೆ ಮಾದಕವಸ್ತುಗಳ ಬೃಹತ್‌ ಜಾಲವನ್ನು ಅಧಿಕಾರಿಗಳು ಭೇದಿಸಿದ್ದರು. ಈ ವೇಳೆ 100 ಕೋಟಿಗೂ ಹೆಚ್ಚು ಮೌಲ್ಯದ 50 ಕೆಜಿಯಷ್ಟು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಶಾಹಿನ್‌ ಭಾಗ್‌ ದೇಶದ್ರೋಹಿಗಳಿಗೆ ನೆಲೆಯಾಗುತ್ತಿರುವುದರ ಕುರಿತಾಗಿ ಪೊಲೀಸರ ತನಿಖೆ ವೇಳೆ ಸಾಕ್ಷ್ಯ ಲಭ್ಯವಾಗಿದ್ದವು. ಶಾಹಿನ್‌ ಭಾಗ್‌ ನಲ್ಲಿ ಸಂಸ್ಕರಣೆಯಾದ ಡ್ರಗ್‌ ಮಾರಾಟದಿಂದ ಸಿಕ್ಕ ಹಣ ಪಾಕ್‌ ಮೂಲಕ ಸ್ಲೀಪರ್‌ ಸೆಲ್‌ ಗಳಿಗೆ ರವಾನಿಸಲಾಗುತ್ತದೆ. ಅವರು ಈ ಹಣವನ್ನು ದೇಶದ ವಿವಿಧ ಭಾಗಗಳಲ್ಲಿ ಕೋಮುಗಲಭೆ ಸೃಷ್ಟಿಸಲು, ವಿಧ್ವಂಸಕ ಕೃತ್ಯಗಳಿಗೆ ಶಸ್ತ್ರಾಸ್ತ್ರ ಖರೀದಿಸಲು ಈ ಹಣವನ್ನು ಬಳಸಲಾಗುತ್ತದೆ ಎಂಬ ವಿಚಾರ ಎನ್‌ ಸಿಬಿ ತನಿಖೆಯಲ್ಲಿ ಬಯಲಾಗಿತ್ತು.
ಶಾಹೀನ್ ಬಾಗ್‌ನಲ್ಲಿ ಅಕ್ರಮ ಒತ್ತುವರಿಗಳನ್ನು ತೆಗೆದುಹಾಕಲು ನಾವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಯಾರೇನೇ ಪ್ರತಿಭಟಿಸಲಿ, ಸರ್ಕಾರಿ ಪ್ರದೇಶದ ಅತಿಕ್ರಮಣವನ್ನು ತೆರವುಗೊಳಿಸುವುದು ನಮ್ಮ ಕಡ್ಡಾಯ ಕರ್ತವ್ಯವಾಗಿದೆ. ಅದನ್ನು ನಾವು ನಿರ್ವಹಿಸುತ್ತಿದ್ದೇವೆ ಎಂದು ಎಸ್‌ಡಿಎಂಸಿಯ ಕೇಂದ್ರ ವಲಯ ಅಧ್ಯಕ್ಷ ರಾಜಪಾಲ್ ಸಿಂಗ್ ಹೇಳಿದ್ದಾರೆ.
ಅತಿಕ್ರಮಣ ತೆರವು ಅಭಿಯಾನ ನಡೆಯುತ್ತಿರುವ ಸ್ಥಳದಲ್ಲಿ ಅಧಿಕಾರಿಗಳ ರಕ್ಷಣೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!