ಹೊಸದಿಗಂತ, ಬೆಂಗಳೂರು:
ರಾಜ್ಯದಲ್ಲಿ ರೈತರು ಬರದ ಬವಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಕಾಂಗ್ರೆಸ್‌ನವರು ಮಜಾ ಮಾಡಲು ದಿಲ್ಲಿಗೆ ಹೋಗಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯನ್ನು ಖಂಡಿಸಿ ಹಾಗೂ ರೈತ ವಿರೋಧಿ ರಾಜ್ಯ ಸರ್ಕಾರವನ್ನು ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆಸಿದ ಬಿಜೆಪಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ವಿಧಾನಸೌಧ ಖಾಲಿ ಖಾಲಿಯಾಗಿದೆ, ಅಧಿಕಾರಿಗಳಿಗೆ ಕೆಲಸವಿಲ್ಲ. ಮಲೆನಾಡಿನಲ್ಲೇ ಕುಡಿಯುವ ನೀರಿಗೆ ಹಾಹಾಕಾರ ಬಂದಿದೆ, ಬೆಂಗಳೂರಿಗೆ ಬರಬೇಕಾದ ಶೇ.30 ನೀರು ಕಡಿಮೆ ಮಾಡಿದ್ದಾರೆ. ಅವರ ಫ್ರೆಂಡ್, ಬ್ರದರ್ ಸ್ಟಾಲಿನ್‌ಗೆ 8 ಟಿಎಂಸಿ ಅಡಿ ನೀರು ಕೊಟ್ಟಿದ್ದಾರೆ ಎಂದು ದೂರಿದರು.
ಸಿದ್ದರಾಮಯ್ಯ ಅವರ ಆರನೇ ಗ್ಯಾರಂಟಿ ಪಂಗನಾಮ ಗ್ಯಾರಂಟಿ. 80 ಜನರಿಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕಾಲಿಟ್ಟಲೆಲ್ಲ ಬರಗಾಲ, ಇವರು ಎಂಥ ಚಾಂಡಾಳರು ಎಂದರೆ ಕಿಸಾನ್ ಸಮ್ಮಾನ್ ಯೋಜನೆ ನಿಲ್ಲಿಸಿದ್ದಾರೆ. ಮನೆಹಾಳ ಕಾಂಗ್ರೆಸ್, ರೈತರಿಗೆ ಕೊಟ್ಟ ಕಿಸಾನ್ ಸಮ್ಮಾನ್ ಹಣ ಕಿತ್ತುಕೊಂಡಿತು. ವಿದ್ಯಾ ಸಿರಿ, ವಿದ್ಯಾನಿಧಿ ಯೋಜನೆಗಳಿಗೆ ಬೆಂಕಿ ಹಾಕಿದರು. ಇವರಿಗೆ ಇನ್ಯಾವ ಕಾಳಜಿ ಇದೆ ಎಂದು ಟೀಕಿಸಿದರು.
ವಿಧಾನಸೌಧದಲ್ಲೇ ವಿದ್ಯುತ್ ಇದೆಯೋ ಇಲ್ವೋ? ಸ್ವಿಚ್ ಹಾಕಿ ನೋಡಬೇಕು. ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ, ಕೈಗಾರಿಕೆಗಳಿಗೆ ವಿದ್ಯುತ್ ಇಲ್ಲ. ವಿದ್ಯುತ್ ಬಂದರೂ ವೋಲ್ಟೇಜ್ ಇಲ್ಲ. ಸರ್ಕಾರದಲ್ಲೇ ವೋಲ್ಟೇಜ್ ಇಲ್ಲ, ಇನ್ನು ವಿದ್ಯುತ್ ಗೆ ವೋಲ್ಟೇಜ್ ಎಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದರು.
ಖರ್ಗೆಯವರನ್ನು ಪ್ರಶ್ನೆ ಮಾಡಲು ಇವರು ದಿಲ್ಲಿಗೆ ಹೋಗಿರುವುದು, ಅನುದಾನ ಕೇಳುವುದಕ್ಕಲ್ಲ. ಕೇಂದ್ರ ಇದುವರೆಗೆ 16628 ಕೋಟಿ ರೂ. ಬರ ಪರಿಹಾರ ಕೊಟ್ಟಿದೆ, ಯುಪಿಎ ಇದ್ದಾಗ 3000 ಕೋಟಿ ರೂ. ಕೊಟ್ಟಿದ್ದರು. 2019-22 ರವರೆಗೆ ಪ್ರವಾಹಕ್ಕೆ 13600 ಕೋಟಿ ರೂ. ನಾವು ಪರಿಹಾರ ಕೊಟ್ಟಿದ್ದೇವೆ. ನೀರಾವರಿಗೆ 13500 ಕೋಟಿ ರೂ., ಹೆಚ್ಚುವರಿಯಾಗಿ11500 ಕೋಟಿ ರೂ. ಕೊಟ್ಟಿದ್ದಾರೆ. ನಾವು ರೈತರಿಗಾಗಿ ಸಾಲ ಮಾಡಿದ್ದೆವು, ಅವರು ಬಿರಿಯಾನಿ ತಿನ್ನಲು ಸಾಲ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಸುರೇಶ್ ಕುಮಾರ್ ಸೇರಿ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.