ಹೊಸದಿಗಂತ ವರದಿ ಮಡಿಕೇರಿ:
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಕಾಂಗ್ರೆಸ್ಸಿಗರ ಭಾರತ್ ಜೋಡೋ ಯಾತ್ರೆ ದೇಶದ ಜನತೆಯನ್ನು ಜೋಡಿಸುವ ಯಾತ್ರೆಯಲ್ಲ. ಬದಲಾಗಿ ಮೂರು ಹೋಳಾಗಿರುವ ಕಾಂಗ್ರೆಸ್ಸನ್ನು ಜೋಡಿಸುವ ಯಾತ್ರೆಯಾಗಿದೆ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವ್ಯಂಗವಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶ ವಿಭಜನೆಯಾಗುವಾಗ ಭಾರತೀಯ ಸೇನೆಯ ಅಂದಿನ ಮುಖ್ಯಸ್ಥರಾಗಿದ್ದ ಜನರಲ್ ತಿಮ್ಮಯ್ಯ ಅವರು ತನಗೆ ಅನುಮತಿ ನೀಡಿದರೆ ಆ ಪ್ರದೇಶಗಳನ್ನು ಮರಳಿ ತರುವುದಾಗಿ ಹೇಳಿದ್ದರು. ಆದರೆ ಅಂದು ರಾಹುಲ್ ಗಾಂಧಿಯವರ ಮುತ್ತಾತ ಜವಾಹರಲಾಲ್ ನೆಹರು ಅವರು ಯಾಕೆ ಮೌನವಾಗಿದ್ದರು ಎಂಬ ಪ್ರಶ್ನೆಗೆ ಇದೀಗ ಗಾಂಧಿ ಹೆಸರಿನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಮುಖಂಡರು ಉತ್ತರಿಸಬೇಕಿದೆ.
ಕಾಂಗ್ರೆಸ್ ಪ್ರಸಕ್ತ ಒಡೆದು ಮೂರು ಹೋಳುಗಳಾಗಿವೆ. ಇದನ್ನು ಮರೆಮಾಚುವ ಮತ್ತು ತಮ್ಮಲ್ಲಿ ಒಗ್ಗಟ್ಟಿದೆ ಎಂದು ಪ್ರದರ್ಶಿಸುವುದಕ್ಕಾಗಿ ಕಾಂಗ್ರೆಸ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದರ ಬಗ್ಗೆ ಕೈ ನಾಯಕರು ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದರು.
ಕರ್ನಾಟಕದ ಕಾಂಗ್ರೆಸ್’ನಲ್ಲೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಂಬ ಎರಡು ಬಣಗಳಿದ್ದು, 15ಸಾವಿರ ಕೋಟಿ ರೂ.ಗಳನ್ನು ಕೊಳ್ಳೆ ಹೊಡೆದಿರುವ ಡಿಕೆಶಿಯವರಿಂದಾಗಲಿ, ಟಿಪ್ಪು ಜಯಂತಿ ಆಚರಣೆಯ ಮೂಲಕ ಕೊಡಗಿನ ಕುಟ್ಟಪ್ಪ ಸೇರಿದಂತೆ 24 ಮಂದಿ ಹಿಂದೂಗಳ ಹತ್ಯೆಗೆ ಕಾರಣರಾದ ಸಿದ್ದರಾಮಯ್ಯನವರಿಂದಾಗಲಿ ರಾಜ್ಯದ ಜನತೆ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವೇ? ಎಂದರು.
ಕೊಡಗು ರೆಜಿಮೆಂಟ್‌ಗೆ ಒತ್ತಾಯ:
ಭಾರತೀಯ ಸೇನೆಯಲ್ಲಿ ಕಳೆದ 6 ದಶಕಗಳಿಂದ ಕೊಡಗಿನ ಸಾವಿರಾರು ಯೋಧರು ಸೇವೆ ಸಲ್ಲಿಸುತ್ತಿದ್ದು, ಅನೇಕರು ಸೇನೆಯ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೇನೆಯಲ್ಲಿ ಕೊಡಗು ರೆಜಿಮೆಂಟ್ ಒಂದನ್ನು ಸ್ಥಾಪಿಸುವಂತಾಗಬೇಕು ಎಂದು ಮನವಿ ಮಾಡಿದರು.