ಹೊಸದಿಗಂತ ವರದಿ ಬೆಳಗಾವಿ:
ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಬಲ ಸೂಚಿಸಿದೆ.
ಗುರ್ಲಾಪುರದಿಂದ ಸಾವಿರಾರು ರೈತರು ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಬೆಳಗಾವಿಯ ಹಿಂಡಲಗಾ ಜೈಲು ಭರೋ ರ‍್ಯಾಲಿ ಆರಂಭಿಸಿದ್ದು, ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಚನ್ನಮ್ಮ ವೃತ್ತದಲ್ಲಿ ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಂಡಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ರೈತರ ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿದರು.
ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ನಡುವೆ ನಡೆಯಲಿರುವ ಸಭೆಯಲ್ಲಿ ರೈತರ ಪರವಾಗಿ ನ್ಯಾಯಯುತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ರೈತರನ್ನು ಯಾವುದೇ ಕಾರಣಕ್ಕೂ ನಿರಾಸೆಗೊಳಿಸಬಾರದು ಎಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು.
ರೈತರ ಹೋರಾಟಕ್ಕೆ ಕರವೇ ಸದಾ ಬೆಂಬಲವಾಗಿ ನಿಲ್ಲಲಿದೆ. ಸಭೆಯಲ್ಲಿ ರೈತ ವಿರೋಧಿ ನಿರ್ಧಾರ ಕೈಗೊಂಡರೆ ಕರವೇ ಕಾರ್ಯಕರ್ತರು ರೈತರೊಂದಿಗೆ ಕೈಜೋಡಿಸಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ವಾಜೀದ್ ಹಿರೇಕುಂಡಿ ಎಚ್ಚರಿಕೆ ನೀಡಿದರು.



