September 3, 2026
Thursday, September 3, 2026
spot_img

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮೆಚ್ಚುಗೆ: ಹೊಸಯಳನಾಡು ಶಾಲೆ ದೇಶಕ್ಕೆ ಮಾದರಿ ಎಂದ ಸಚಿವ ಟಿ. ರಘುಮೂರ್ತಿ

ಹೊಸದಿಗಂತ ವರದಿ ಚಿತ್ರದುರ್ಗ:

ಹೊಸಯಳನಾಡು ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಹೆಮ್ಮೆಯ ವಿಷಯ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಹೇಳಿದರು.

ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಗುರುವಾರ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಶಾಲಾ ಕೊಠಡಿಗಳು, ಪ್ರಾರ್ಥನಾ ಮಂದಿರ ಹಾಗೂ ಕುಟೀರಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲೆಯ ಮಹಾಪೋಷಕರಾಗಿರುವ ತಿಪ್ಪೇಸ್ವಾಮಿ ಹಾಗೂ ಅವರ ತಂಡ ರೂ.25 ಕೋಟಿಗೂ ಹೆಚ್ಚು ಮೊತ್ತದ ಅನುದಾನ ಹಾಗೂ ದೇಣಿಗೆಯನ್ನು ವಿವಿಧ ಸಂಸ್ಥೆಗಳಿಂದ ತಂದು ಈ ಶಾಲೆಯನ್ನು ದೇಶದಲ್ಲೇ ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರ ಜಾರಿಯಾಗಲಿ:

ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳಲ್ಲಿ ಓದುವ ಬಡವರ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಮತ್ತು ಸಮಾನ ಅವಕಾಶಗಳು ಸಿಗಬೇಕಾದರೆ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ಸೂತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಜಾರಿಗೊಳಿಸಬೇಕು ಎಂದು ಸಂಸದ ಗೋವಿಂದ ಎಂ. ಕಾರಜೋಳ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಸ್ವಾತಂತ್ರ ನಂತರದಲ್ಲಿ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಮಠ ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಲ್ಲಾ ವರ್ಗದ ಜನರಿಗೂ ಶಿಕ್ಷಣ ನೀಡಿದವು. ಇಂದು ಸರ್ಕಾರವು ಶಿಕ್ಷಕರನ್ನು ಮೆರಿಟ್ ಹಾಗೂ ರೋಸ್ಟರ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತದೆ. ಹೀಗೆ ಆಯ್ಕೆಯಾಗುವ ಶಿಕ್ಷಕರು, ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳು ಕೂಡ ಮೆರಿಟ್ ಮಟ್ಟದಲ್ಲಿ ಬೆಳೆಯುವಂತೆ ಬೋಧನೆ ಮಾಡಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಮತ್ತು ಶಿಕ್ಷಣ ವ್ಯವಸ್ಥೆ ಸಂಪೂರ್ಣ ಸಫಲವಾಗುತ್ತದೆ ಎಂದು ಶಿಕ್ಷಕ ವೃಂದಕ್ಕೆ ಕಿವಿಮಾತು ಹೇಳಿದರು.

ಶಿಕ್ಷಣದಲ್ಲಿ ತಾರತಮ್ಯ ತಪ್ಪಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ತ್ರಿಭಾಷಾ ನೀತಿಯನ್ನು ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಒತ್ತಾಯಿಸಿದರು.

ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳು ಇಂದಿಗೂ ಸರ್ಕಾರಿ ಶಾಲೆಯಲ್ಲೇ ಓದಲು ಇಷ್ಟಪಡುತ್ತಾರೆ ಎಂಬುದಕ್ಕೆ ಹೊಸಯಳನಾಡು ಕರ್ನಾಟಕ ಪಬ್ಲಿಕ್ ಶಾಲೆ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಹೇಳಿದರು.

ಜ್ಞಾನಕ್ಕೆ ಸಮಾನವಾದದ್ದು ಪ್ರಪಂಚದಲ್ಲಿ ಬೇರೊಂದಿಲ್ಲ. ೧೨ನೇ ಶತಮಾನದ ಶರಣ ಅಲ್ಲಮಪ್ರಭುಗಳು ಹೇಳಿದಂತೆ ’ಹೇಮ ನಿನ್ನದಲ್ಲ, ಭೂಮಿ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ… ನಿನ್ನದಲ್ಲದ್ದಕ್ಕೆ ಜ್ಞಾನ ರತ್ನ’ ಎಂಬಂತೆ, ಮನುಷ್ಯ ಗಳಿಸುವ ಆಸ್ತಿ, ಅಧಿಕಾರ ಯಾವುದೂ ಶಾಶ್ವತವಲ್ಲ. ಆತ ಗಳಿಸುವ ಜ್ಞಾನ, ವಿದ್ಯೆ ಮತ್ತು ಸಂಸ್ಕಾರ ಮಾತ್ರ ಆತನನ್ನು ಕೊನೆವರೆಗೂ ಕಾಪಾಡುತ್ತದೆ. ಜ್ಞಾನಿಯಾದವನು ಜಗತ್ತಿನಾದ್ಯಂತ ಪೂಜಿಸಲ್ಪಡುತ್ತಾನೆ ಎಂದರು.

ಇದನ್ನೂ ಓದಿ:

ಶಾಲೆಯ ಮಹಾಪೋಷಕ ನಾ.ತಿಪ್ಪೇಸ್ವಾಮಿ ಮಾತನಾಡಿ, ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ‘ಪುರಾ’ ಎಂಬ ಕಲ್ಪನೆಯನ್ನು ನೀಡಿ, ಗ್ರಾಮೀಣ ಭಾಗದಲ್ಲಿ ನಗರ ಪ್ರದೇಶದಲ್ಲಿ ದೊರಕುವ ಸೌಲಭ್ಯಗಳನ್ನು ನೀಡಬೇಕು ಎಂದು ಕರೆ ನೀಡಿದರು.

ಅವರ ಆಶಯದಂತೆ ನಗರ ಪ್ರದೇಶಗಳಲ್ಲಿ ದೊರೆಯುವ ಆಧುನಿಕ ಶೈಕ್ಷಣಿಕ ಸೌಲಭ್ಯಗಳು ಗ್ರಾಮೀಣ ಮಕ್ಕಳಿಗೂ ಸಿಗಬೇಕು ಎಂಬ ಉದ್ದೇಶದಿಂದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಇ-ಲೈಬ್ರರಿ, ಕಂಪ್ಯೂಟರ್ ಲ್ಯಾಬ್ ಹಾಗೂ ಸುಸಜ್ಜಿತ ಪ್ರಯೋಗಾಲಯಗಳನ್ನು ಶಾಲೆಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದ ಗೌಡ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿ.ಪಂ. ಸಿಇಓ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ತಿಮ್ಮಶೆಟ್ರು, ತಾಲ್ಲೂಕು ಶಿಕ್ಷಣ ಸುಧಾರಣ ಸಮಿತಿ ಅಧ್ಯಕ್ಷ ಎ.ಎಂ.ಅಮೃತೇಶ್ವರ ಸ್ವಾಮಿ, ಸೇರಿದಂತೆ ಮತ್ತಿತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !