ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ: ಸಂಭ್ರಮದಲ್ಲಿ ನಡೆಯಿತು ರಾಯರ ಮಧ್ಯಾರಾಧನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಲಿಯುಗದ ಕಾಮಧೇನು ಶ್ರೀರಾಘವೇಂದ್ರ ಸ್ವಾಮೀಜಿಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಮುಂದುವರಿದಿದ್ದು, ಅಪಾರ ಸಂಖ್ಯೆಯ ಭಕ್ತರ ಭಕ್ತಿಭಾವದ ನಡುವೆ ರಾಯರ ಮಧ್ಯಾರಾಧನೆ ನಡೆಯಿತು.
ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ತುಂಗಭದ್ರಾ ನದಿ ತೀರದಲ್ಲಿ ಪುಣ್ಯ ಸ್ನಾನಗೈದು ರಾಯರ ಮೂಲ ಬೃಂದಾವನ ದರ್ಶನ ಪಡೆದರು.

ಮಧ್ಯಾರಾಧನೆಯ ದಿನವಾದ ಇಂದು ಭಕ್ತರಿಂದ ಶ್ರೀಮಠದ ಪ್ರಾಂಗಣ ತುಂಬಿ ತುಳುಕುತ್ತಿತ್ತು. ವೇದ ಘೋಷ, ಮಂತ್ರ ಪಠಣ ಅನುರಣಿಸಿತು. ಮುಂಜಾನೆಯಿಂದಲೇ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪ್ರಹ್ಲಾದರಾಜರ ಪಾದಪೂಜೆ ನಡೆಯಿತು.

ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ)ದ ಅಧಿಕಾರಿಗಳು ರಾಯರಿಗೆ ಸಮರ್ಪಿಸಲು ತಂದಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ವಿಶೇಷ ವಾದ್ಯ ಮೇಳ, ಮೆರವಣಿಗೆ ಮೂಲಕ ಮಂತ್ರಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಶೇಷವಸ್ತ್ರವನ್ನು ಪಡೆದ ಶ್ರೀ ಸುಬುಧೇಂದ್ರ ತೀರ್ಥರು, ಅದನ್ನು ತಲೆಮೇಲೆ ಹೊತ್ತು ರಾಯರ ಸನ್ನಿಧಿಗೆ ತೆಗೆದುಕೊಂಡು ಹೋದರು. ಇದೇ ವೇಳೆ ರಾಜ್ಯ ಗೃಹ ಸಚಿವ ಅರಗಜ್ಞಾನೇಂದ್ರ ಅವರೂ ಶೇವಸ್ತ್ರವನ್ನು ತಲೆಮೇಲೆ ಹೊತ್ತು ನಡೆದರು.

ಬಳಿಕ ಪಂಚಾಭಿಷೇಕ, ಆರುತಿ, ಶೇಷವಸ್ತ್ರ ಸಮರ್ಪಣೆ ಬಳಿಕ ಪ್ರಾಕಾರದಲ್ಲಿ ಸುವರ್ಣ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹವು ರಾಯರಿಗೆ ಜಯಘೋಷ ಕೂಗಿದರು. ಕೈಮುಗಿದು ನಮಿಸಿ, ಧನ್ಯರಾದರು. ಮಧ್ಯಾಹ್ನದ ನಂತರ ರಜತ, ಸ್ವರ್ಣ ರಥೋತ್ಸವ ಜರುಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!