ಪ್ರತಿ ತಿಂಗಳು ಪಿರಿಯಡ್ಸ್ ಅಥವಾ ಮುಟ್ಟಿನ ದಿನಗಳು ಹತ್ತಿರ ಬರುತ್ತಿದ್ದಂತೆ ಹಲವು ಮಹಿಳೆಯರಲ್ಲಿ ಒಂದು ರೀತಿಯ ಆತಂಕ ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಆ ದಿನಗಳಲ್ಲಿ ಕಾಡುವ ಅಸಹನೀಯ ಹೊಟ್ಟೆನೋವು ಮತ್ತು ಸೊಂಟದ ಸೆಳೆತ. ಈ ನೋವನ್ನು ತಡೆಯಲು ತಕ್ಷಣವೇ ಪೇನ್‌ಕಿಲ್ಲರ್ ಮಾತ್ರೆಗಳನ್ನು ನುಂಗುವ ಅಭ್ಯಾಸ ಹೆಚ್ಚಿನವರಿಗಿದೆ. ಆದರೆ, ಪದೇ ಪದೇ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಮ್ಮ ಅಡುಗೆಮನೆಯಲ್ಲಿರುವ ಅತ್ಯಮೂಲ್ಯ ಔಷಧೀಯ ಗುಣಗಳ ಗಣಿ ಅರಿಶಿನವು ಈ ಸಮಸ್ಯೆಗೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
ಗರ್ಭಾಶಯದ ಸ್ನಾಯುಗಳಿಗೆ ಆರಾಮ ನೀಡುತ್ತದೆ
ಪಿರಿಯಡ್ಸ್ ಸಮಯದಲ್ಲಿ ದೇಹದಲ್ಲಿ ಪ್ರೊಸ್ಟಗ್ಲಾಂಡಿನ್ ಎಂಬ ಹಾರ್ಮೋನ್ ಮಟ್ಟ ಹೆಚ್ಚಾಗುವುದರಿಂದ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಅರಿಶಿನದಲ್ಲಿರುವ ‘ಕುರ್ಕ್ಯುಮಿನ್’ ಎಂಬ ಪೋಷಕಾಂಶವು ಸ್ನಾಯುಗಳ ಬಿಗಿತವನ್ನು ಸಡಿಲಗೊಳಿಸುತ್ತದೆ. ಇದು ನೈಸರ್ಗಿಕವಾಗಿ ನೋವು ನಿವಾರಕವಾಗಿ ಕೆಲಸ ಮಾಡಿ, ಹೊಟ್ಟೆಯ ಸೆಳೆತವನ್ನು ಶಾಂತಗೊಳಿಸುತ್ತದೆ.
ಕಾಲು ನೋವು ಮತ್ತು ಬೆನ್ನು ನೋವಿಗೆ ಮುಕ್ತಿ
ಮುಟ್ಟಿನ ಸಮಯದಲ್ಲಿ ಕೇವಲ ಹೊಟ್ಟೆನೋವು ಮಾತ್ರವಲ್ಲದೆ ಕಾಲುಗಳ ಜಡತ್ವ, ಪಾದಗಳ ನೋವು ಹಾಗೂ ತೀವ್ರವಾದ ಬೆನ್ನುನೋವು ಕೂಡ ಕಾಡುತ್ತದೆ. ಅರಿಶಿನದಲ್ಲಿರುವ ಆಂಟಿ-ಇನ್‌ಫ್ಲಮೇಟರಿ ಗುಣಗಳು ಇಡೀ ದೇಹದ ಮೂಳೆ ಮತ್ತು ಕೀಲುಗಳ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಮೂಡ್ ಸ್ವಿಂಗ್ಸ್ ಮತ್ತು ಕಿರಿಕಿರಿ ದೂರ ಮಾಡುತ್ತದೆ
ಹಾರ್ಮೋನ್‌ಗಳ ಏರುಪೇರಿನಿಂದಾಗಿ ಈ ದಿನಗಳಲ್ಲಿ ಸಣ್ಣ ವಿಷಯಕ್ಕೂ ಕೋಪ ಬರುವುದು, ಅಳು ಬರುವುದು ಅಥವಾ ಕಿರಿಕಿರಿ ಉಂಟಾಗುವುದು ಸಹಜ. ಅರಿಶಿನ ನೀರು ದೇಹದಲ್ಲಿ ‘ಹ್ಯಾಪಿ ಹಾರ್ಮೋನ್ಸ್’ ಹೆಚ್ಚಾಗಲು ಪ್ರೇರೇಪಿಸುತ್ತದೆ. ಇದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿ ಆರಾಮದಾಯಕ ಅನುಭೂತಿ ನೀಡುತ್ತದೆ.
ಅರಿಶಿನ ನೀರನ್ನು ಕುಡಿಯುವ ವಿಧಾನ
ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ. ಅದಕ್ಕೆ ಕಾಲು ಚಮಚ ಶುದ್ಧ ಅರಿಶಿನ ಪುಡಿ ಮತ್ತು ಒಂದು ಚಿಟಿಕೆ ಕಪ್ಪು ಮೆಣಸಿನ ಪುಡಿ ಹಾಕಿ. ನೀರು ಉಗುರುಬೆಚ್ಚಗಾದಾಗ ಅರ್ಧ ಚಮಚ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಒಂದು ಲೋಟ ಬಿಸಿ ಹಾಲಿಗೆ ಕಾಲು ಚಮಚ ಅರಿಶಿನ ಮತ್ತು ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದು ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ನಿದ್ರಾಹೀನತೆಯನ್ನು ದೂರ ಮಾಡಿ, ನೆಮ್ಮದಿಯ ನಿದ್ದೆಗೆ ಸಹಾಯ ಮಾಡುತ್ತದೆ.
ಮುನ್ನೆಚ್ಚರಿಕೆಗಳು
ಅರಿಶಿನ ನೀರನ್ನು ಪಿರಿಯಡ್ಸ್ ಆರಂಭವಾಗುವ ಎರಡು ದಿನಗಳ ಮೊದಲಿನಿಂದ ಕುಡಿಯಲು ಆರಂಭಿಸಿದರೆ ಇನ್ನು ಹೆಚ್ಚಿನ ಪ್ರಯೋಜನ ಸಿಗುತ್ತದೆ.
ಅರಿಶಿನವು ದೇಹದಲ್ಲಿ ಉಷ್ಣತೆ ಉಂಟುಮಾಡುವುದರಿಂದ ದಿನಕ್ಕೆ ಕಾಲು ಚಮಚಕ್ಕಿಂತ ಹೆಚ್ಚು ಬಳಸಬಾರದು.
ಈಗಾಗಲೇ ಅತಿಯಾದ ರಕ್ತಸ್ರಾವ ಆಗುತ್ತಿರುವ ಮಹಿಳೆಯರು ಅರಿಶಿನ ನೀರನ್ನು ಕುಡಿಯುವುದನ್ನು ತಪ್ಪಿಸಬೇಕು.



