ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ತೆರೆದರೆ ಸಾಕು, ಲಕ್ಷಾಂತರ ವೀಕ್ಷಕರನ್ನು ಸೆಳೆಯುತ್ತಿರುವುದು ಈ ‘ಡೈಲಿ ವ್ಲಾಗ್ಸ್’. ಟ್ರಾವೆಲ್, ಎಜುಕೇಶನ್ ಅಥವಾ ಇತರೆ ಸ್ಪೆಷಲ್ ವೀಡಿಯೋಗಳಿಗಿಂತಲೂ ಒಬ್ಬ ಸಾಮಾನ್ಯ ವ್ಯಕ್ತಿಯ ದಿನಚರಿಯ ವಿಡಿಯೋಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ ಅತಿ ಹೆಚ್ಚು. ಅದರಲ್ಲೂ Gen Z ಯುವಕರು ಇಂತಹ ವ್ಲಾಗ್ಗಳ ಮೋಡಿಗೆ ಮನಸೋತ್ತಿದ್ದಾರೆ. ತಮಗೆ ಪರಿಚಯವಿಲ್ಲದ ವ್ಯಕ್ತಿಯೊಬ್ಬರು ಬೆಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಏನು ಮಾಡುತ್ತಾರೆ ಎಂಬುದನ್ನು ಗಂಟೆಗಟ್ಟಲೆ ಕೂತು ನೋಡಲು ಜನರಿಗೇಕೆ ಇಷ್ಟೊಂದು ಕ್ರೇಜ್? ಇದರ ಹಿಂದಿನ ಮನೋಶಾಸ್ತ್ರವೇನು ಎಂಬುದನ್ನು ತಿಳಿಯೋಣ.
ಒಂಟಿತನಕ್ಕೆ ಮದ್ದು
ಇತ್ತೀಚಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಅನೇಕ ಯುವಕರು ಒಂಟಿತನವನ್ನು ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಡೈಲಿ ವ್ಲಾಗ್ಗಳು ವೀಕ್ಷಕರಿಗೆ ತಮ್ಮ ಜೊತೆ ಯಾರೋ ಮಾತನಾಡುತ್ತಿದ್ದಾರೆ ಅಥವಾ ಯಾರೋ ಒಡನಾಡಿಯಿದ್ದಾರೆ ಎಂಬ ಕೃತಕ ಭಾವನೆಯನ್ನು ನೀಡುತ್ತವೆ. ಪರದೆಯ ಆಚೆ ಇರುವ ಯೂಟ್ಯೂಬರ್ ತಮ್ಮ ಸ್ನೇಹಿತನಂತೆ ಭಾಸವಾಗುವುದರಿಂದ, ವೀಕ್ಷಕರು ತಮ್ಮ ಒಂಟಿತನವನ್ನು ಮರೆಯಲು ಈ ವೀಡಿಯೊಗಳನ್ನು ಹೆಚ್ಚು ಇಷ್ಟಪಡುತ್ತಾರೆ.
ರಿಯಾಲಿಟಿ ಚೆಕ್
ದೊಡ್ಡ ದೊಡ್ಡ ಸಿನಿಮಾಗಳು ಅಥವಾ ರಿಯಾಲಿಟಿ ಶೋಗಳು ಎಲ್ಲವೂ ಸ್ಕ್ರಿಪ್ಟ್ ಮಾಡಿದಂತಿರುತ್ತವೆ. ಆದರೆ ಡೈಲಿ ವ್ಲಾಗ್ಗಳಲ್ಲಿ ಒಂದು ಸಹಜತೆ ಇರುತ್ತದೆ. ವ್ಲಾಗರ್ಸ್ ತಮ್ಮ ಮನೆಯ ಸಣ್ಣಪುಟ್ಟ ಗೊಂದಲಗಳು, ಅಡುಗೆ ಮಾಡುವಾಗ ಆಗುವ ಎಷ್ಟೋ ಎಡವಟ್ಟುಗಳು, ಸೋಲು-ಗೆಲುವುಗಳನ್ನು ಯಾವುದೇ ಮುಖವಾಡವಿಲ್ಲದೆ ತೋರಿಸುತ್ತಾರೆ. ಈ ನೈಜ ಅನುಭವವೇ ಜನರನ್ನು ಹೆಚ್ಚು ಆಕರ್ಷಿಸುತ್ತದೆ.
ಕ್ಯೂರಿಯಾಸಿಟಿ
ಮಾನವನ ಮೂಲಸ್ವಭಾವಗಳಲ್ಲಿ ‘ಕುತೂಹಲ’ ಕೂಡ ಒಂದು. ಬೇರೆಯವರ ಮನೆಯಲ್ಲಿ, ಅವರ ವೈಯಕ್ತಿಕ ಬದುಕಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತಿಳಿಯುವ ಕುತೂಹಲ ಬಹುತೇಕರಿಗೆ ಇರುತ್ತದೆ. ಡೈಲಿ ವ್ಲಾಗ್ಗಳು ಈ ಕುತೂಹಲಕ್ಕೆ ಸುಲಭವಾಗಿ ದಾರಿ ಮಾಡಿಕೊಡುತ್ತವೆ. ನಮ್ಮಂತೆಯೇ ಇರುವ ಸಾಮಾನ್ಯರ ಅಡುಗೆ ಮನೆ, ಬಟ್ಟೆ, ಸಣ್ಣಪುಟ್ಟ ಸಮಸ್ಯೆಗಳು ಮತ್ತು ಖುಷಿಯ ಕ್ಷಣಗಳನ್ನು ಹತ್ತಿರದಿಂದ ನೋಡುವುದು ಜನರಿಗೆ ಥ್ರಿಲ್ ನೀಡುತ್ತದೆ.
ಒತ್ತಡದಿಂದ ತಾತ್ಕಾಲಿಕ ಮುಕ್ತಿ
ದಿನ ಕೆಲಸದ ಜಂಜಾಟ, ಓಡಾಟ, ಟೆನ್ಷನ್ನಿಂದ ಬಳಲಿ ಹೋದವರಿಗೆ ಈ ವ್ಲಾಗ್ಗಳು ಒಳ್ಳೆಯ ರಿಲ್ಯಾಕ್ಸ್ಮೆಂಟ್ ನೀಡುತ್ತವೆ. ಯಾವುದೇ ತಲೆಬಿಸಿ ಇಲ್ಲದೆ, ಸುಮ್ಮನೆ ಕುಳಿತು ಇನ್ನೊಬ್ಬರ ದಿನಚರಿಯನ್ನು ಆನಂದಿಸುವುದು ಮನಸ್ಸಿಗೆ ಒಂದು ರೀತಿಯ ಹಗುರತೆಯನ್ನು ನೀಡುತ್ತದೆ. ಒಟ್ಟಿನಲ್ಲಿ, ಡೈಲಿ ವ್ಲಾಗ್ಗಳು ಕೇವಲ ವೀಡಿಯೊಗಳಲ್ಲ, ಬದಲಿಗೆ ಇಂದಿನ ಡಿಜಿಟಲ್ ಯುಗದ ಜನರ ಭಾವನಾತ್ಮಕ ಅಗತ್ಯವಾಗಿ ಮಾರ್ಪಟ್ಟಿವೆ.



