September 28, 2026
Monday, September 28, 2026
spot_img

ಎದೆ ಉರಿಯನ್ನು ಮಾಮೂಲಿ ‘ಅಸಿಡಿಟಿ’ ಎಂದು ನಿರ್ಲಕ್ಷಿಸುತ್ತಿದ್ದೀರಾ? ಹಾಗಾದರೆ ಈ ವಿಚಾರ ತಿಳಿದುಕೊಳ್ಳಿ

ಪ್ರತಿದಿನ ನಮಗೆ ಎದುರಾಗುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಲ್ಲಿ ‘ಎದೆ ಉರಿ’ ಕೂಡ ಒಂದು. ಖಾರವಾದ ಆಹಾರ ತಿಂದಾಗ, ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಾಗ ಅಥವಾ ಮಾನಸಿಕ ಒತ್ತಡವಿದ್ದಾಗ ಹೊಟ್ಟೆಯಲ್ಲಿರುವ ಆಸಿಡ್ ಎದೆಯಲ್ಲಿ ಉರಿ ಉಂಟಾಗುವಂತೆ ಮಾಡುತ್ತದೆ. ಇದನ್ನು ನಾವು ಸಾಮಾನ್ಯ ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಎಂದುಕೊಂಡು ಯಾವುದೋ ಒಂದು ಸಿರಪ್ ಅಥವಾ ಟ್ಯಾಬ್ಲೆಟ್ ನುಂಗಿ ಸುಮ್ಮನಾಗಿಬಿಡುತ್ತೇವೆ. ಆದರೆ, ಇಲ್ಲೇ ದೊಡ್ಡ ಅಪಾಯ ಅಡಗಿದೆ.

ನಮ್ಮ ದೇಹದಲ್ಲಿ ಜಠರ ಮತ್ತು ಹೃದಯ ಎರಡೂ ಎದೆಯ ಭಾಗದಲ್ಲೇ ಅಕ್ಕಪಕ್ಕದಲ್ಲಿವೆ. ಇವೆರಡಕ್ಕೂ ನರಮಂಡಲದ ಸಂಪರ್ಕ ಒಂದೇ ರೀತಿಯಾಗಿರುತ್ತದೆ. ಹೀಗಾಗಿ, ಜಠರದಲ್ಲಿ ಆಸಿಡ್ ಹೆಚ್ಚಾಗಿ ಉರಿ ಕಾಣಿಸಿಕೊಂಡಾಗ ಬರುವ ನೋವು ಮತ್ತು ಹೃದಯಕ್ಕೆ ರಕ್ತಸಂಚಾರ ಕಡಿಮೆಯಾದಾಗ ಬರುವ ನೋವು ಒಂದೇ ಜಾಗದಲ್ಲಿ ಅನುಭವಕ್ಕೆ ಬರುತ್ತವೆ. ಇದರಿಂದಾಗಿ ಅನೇಕರು ಹೃದಯಾಘಾತದ ಲಕ್ಷಣವನ್ನೂ ಸಾಮಾನ್ಯ ಆಸಿಡ್ ರಿಫ್ಲಕ್ಸ್ ಎಂದು ಭಾವಿಸಿ ನಿರ್ಲಕ್ಷಿಸಿ ಪ್ರಾಣಕ್ಕೆ ಕಂಟಕ ತಂದುಕೊಳ್ಳುತ್ತಾರೆ.

ಆಸಿಡ್ ರಿಫ್ಲಕ್ಸ್ ಲಕ್ಷಣಗಳು ಹೇಗಿರುತ್ತವೆ?

ಆಹಾರ ತಿಂದ ತಕ್ಷಣ ಅಥವಾ ಮಲಗಿದಾಗ ಎದೆಯ ಮಧ್ಯಭಾಗದಲ್ಲಿ ಉರಿ ಹೆಚ್ಚಾಗುತ್ತದೆ. ಬಾಯಿಗೆ ಹುಳಿ ನೀರು ಅಥವಾ ತಿಂದ ಆಹಾರ ಮರಳಿ ಬರುವುದು. ಗಂಟಲಿನಲ್ಲಿ ಉರಿ, ನುಂಗಲು ಕಷ್ಟವಾಗುವುದು ಮತ್ತು ಹೊಟ್ಟೆ ಉಬ್ಬರ ಹೆಚ್ಚಾಗುತ್ತದೆ.

ಹೃದಯದ ಸಮಸ್ಯೆಯಾಗಿದ್ದರೆ ಲಕ್ಷಣಗಳು ಹೇಗಿರುತ್ತವೆ?

ಎದೆಯ ಮೇಲೆ ಯಾರೋ ಭಾರವಾದ ಕಲ್ಲು ಇಟ್ಟಂತೆ ಒತ್ತಡ, ಹಿಂಡಿದಂತಾಗುವುದು ಅಥವಾ ಬಿಗಿತದ ನೋವು. ಈ ನೋವು ಎದೆಯಿಂದ ಎಡಕೈ, ಕುತ್ತಿಗೆ, ದವಡೆ, ಬೆನ್ನು ಅಥವಾ ಹೊಟ್ಟೆಯ ಮೇಲ್ಭಾಗಕ್ಕೆ ಹರಡುವುದು. ಸುಮ್ಮನೆ ಕುಳಿತಿದ್ದರೂ ವಿಪರೀತ ಬೆವರು ಬರುವುದು. ಉಸಿರಾಟದಲ್ಲಿ ತೊಂದರೆ, ತಲೆಸುತ್ತು ಮತ್ತು ವಾಕರಿಕೆ. ನಡಿಗೆ ಅಥವಾ ಕೆಲಸ ಮಾಡುವಾಗ ನೋವು ಹೆಚ್ಚಾಗಿ, ವಿಶ್ರಾಂತಿ ಪಡೆದಾಗ ಕೊಂಚ ಕಡಿಮೆಯಾಗುವುದು.

ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬೇಡಿ

ನಿಮಗೆ ಬರುವ ಎದೆ ನೋವು ಅಥವಾ ಎದೆ ಉರಿ ಹೊಸದಾಗಿದ್ದರೆ, ಮುಂಚೆಂದೂ ಈ ರೀತಿ ಆಗಿರದಿದ್ದರೆ ಅಥವಾ ಅದರ ಜೊತೆಗೆ ಬೆವರು ಮತ್ತು ಉಸಿರಾಟದ ತೊಂದರೆ ಕಂಡುಬಂದರೆ, ಅದನ್ನು ಆಸಿಡ್ ರಿಫ್ಲಕ್ಸ್ ಎಂದು ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುವುದು ಬುದ್ಧಿವಂತಿಕೆ.

ಅಸಿಡಿಟಿ ಹೃದಯದ ಸಮಸ್ಯೆಯಲ್ಲದಿದ್ದರೂ, ಹೃದಯಾಘಾತದ ಮುನ್ಸೂಚನೆಗಳು ಅಸಿಡಿಟಿಯಂತೆಯೇ ಇರುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಆರೋಗ್ಯದ ವಿಚಾರದಲ್ಲಿ ವಹಿಸುವ ಸಣ್ಣ ಎಚ್ಚರಿಕೆ ನಿಮ್ಮ ದೊಡ್ಡ ಜೀವವನ್ನು ಉಳಿಸಬಲ್ಲದು.

Must Read