ಹೊಸದಿಗಂತ ವರದಿ,ಹಾವೇರಿ:
ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡಲು ರಾಜ್ಯ ಸರ್ಕಾರ ಕುಂಟು ನೆಪ ಹೇಳುತ್ತಿದೆ. ಬರ ಘೋಷಣೆಗೆ ಮುಹೂರ್ತ ನೋಡುತ್ತಿದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಬಳಿ ನಡೆದಿದ್ದ ಪಟಾಕಿ ದುರಂತದ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ಬರಗಾಲ ಘೋಷಣೆ ಮಾಡುತ್ತೇವೆ ಎಂದು ಹೇಳಿ, ಇಲ್ಲಿಯವರೆಗೂ ಬರಗಾಲ ಘೋಷಣೆ ಮಾಡಿಲ್ಲ. ನಾವು ಕೂಡಾ ಕೇಂದ್ರಕ್ಕೆ ಪತ್ರ ಬರೆದಿದ್ದೆವೆ ಅಂತ ಕೇಂದ್ರದ ಮೇಲೆ ನೆಪ ಹೇಳುತ್ತಿದ್ದಾರೆ. ಈ ಸಬೂಬು ಹೇಳಿ ಬರಗಾಲ ಘೋಷಣೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಳೆಗಾಲ ಮುಗಿಯುತ್ತ ಬಂತು ಈಗೇನು ಘೋಷಣೆ ಮಾಡುತ್ತಾರೆ. ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಲೆದೋರಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಕೊರತೆಯಿಂದ ತೊಂದರೆಯಾಗಿದೆ. ಹಣಕಾಸಿನ ನೇರವು ನೀಡಿ ವಿದ್ಯುತ್ ಖರೀದಿ ಮಾಡಬೇಕು . ಬರಗಾಲ ಘೋಷಣೆ ಮಾಡದೆ ಸುಮ್ಮನೆ ಮುಂದಕ್ಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿಗಳ ಅಕೌಂಟ್ ನಲ್ಲಿ ಇರುವ ಹಣ ಬಳಕೆ ಮಾಡುತ್ತಿಲ್ಲ. ಬರ ಘೋಷಣೆಗೂ ಮೂಹರ್ತ ನೋಡುತ್ತಿದ್ದೀರಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಇನ್ನೂ ಯಾವಾಗ ಬರಗಾಲ ಘೋಷಣೆ ಮಾಡುವುದು? ಎಂದು ಪ್ರಶ್ನಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಬೇಕು. ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಈ ಬಗ್ಗೆ ನಾನು ಅಧಿವೇಶನದಲ್ಲಿ ಹೇಳಿದರೂ ಕೃಷಿ ಸಚಿವರು ಅಲ್ಲಗಳೆದಿದ್ದರು. ಮಾದ್ಯಮಗಳಲ್ಲಿ ರೈತರ ಆತ್ಮಹತ್ಯೆಗಳ ಸುದ್ದಿ ಬಂದ ನಂತರ ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಆತ್ಮಹತ್ಯೆ ಪ್ರಕರಣಗಳಲ್ಲಿ FSL ರಿಪೋರ್ಟ್ ಬರುವುದು ವಿಳಂಬವಾಗುತ್ತದೆ. ಕನಿಷ್ಠ 15-20 ದಿನ ಸಮಯ ಬೇಕಾಗುತ್ತದೆ. ರೈತರು ವಿವಿಧ ರೂಪದಲ್ಲಿ ಸಾಲ ಮಾಡಿರುತ್ತಾರೆ. ಮೃತರ ಕುಟುಂಬಗಳಿಗೆ ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಆತ್ಮ ಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಬಿಜೆಪಿಯಿಂದ ಸಾಂತ್ವನ ಹೇಳುವುದರ ಜೊತೆಗೆ ಸಕಾರಣ ತಿಳಿದುಕೊಂಡು ಆರ್ಥಿಕ ಸಹಾಯ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ. ಇದಕ್ಕೆ ಸಭೆ ಮಾಡಿ ನಿರ್ಣಯಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಾಜಿ ಶಾಸಕ ವಿ.ಆರ್. ಬಳ್ಳಾರಿ, ಶಿವರಾಜ ಸಜ್ಜನರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ ಮತ್ತಿತರರು ಇದ್ದರು.