August 30, 2026
Sunday, August 30, 2026
spot_img

ಅಡಿಕೆ ಬೆಲೆ ಏನೋ ಚೆನ್ನಾಗಿದೆ, ಆದರೆ ಇಳುವರಿ ಮಾತ್ರ ತೀರಾ ಕಡಿಮೆ! ಕರ್ನಾಟಕದ ಬೆಳೆಗಾರರ ಕಣ್ಣೀರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ಹೆಚ್ಚಾಗಿದೆ, ಆದರೆ ಉತ್ಪಾದನೆ ಮಾತ್ರ ತೀವ್ರ ಕುಸಿತ ಕಂಡಿದೆ!

ಹೌದು, ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳು ಬಹಿರಂಗಪಡಿಸಿವೆ. ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ಈ ಬಗ್ಗೆ ಪ್ರಶ್ನೆಯೆತ್ತಿದ್ದು, ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಲಿಖಿತ ಉತ್ತರ ನೀಡಿದ್ದಾರೆ.

2021-22ರಲ್ಲಿ ರಾಜ್ಯದಲ್ಲಿ 6,03,121 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದರೆ, 2025-26ರ (ಎರಡನೇ ಮುಂಗಡ ಅಂದಾಜು) ವೇಳೆಗೆ ಅದು 7,98,677 ಹೆಕ್ಟೇರ್ಗೆ ಏರಿಕೆಯಾಗಿದೆ. ಅಂದರೆ ಸುಮಾರು 1.95 ಲಕ್ಷ ಹೆಕ್ಟೇರ್ (32%) ಹೆಚ್ಚಳವಾಗಿದೆ.

ಆದರೆ ಇದೇ ಅವಧಿಯಲ್ಲಿ ಸರಾಸರಿ ಉತ್ಪಾದಕತೆ ಪ್ರತಿ ಹೆಕ್ಟೇರ್‌ಗೆ 2.24 ಟನ್‌ನಿಂದ 1.42 ಟನ್‌ಗೆ ಕುಸಿದಿದ್ದು, ಇದು ಸುಮಾರು 37% ಇಳಿಕೆಯಾಗಿದೆ ಎಂದಿದ್ದಾರೆ.

ಉತ್ಪಾದನೆ ತೀವ್ರ ಕುಸಿತ

ಉತ್ಪಾದಕತೆ ಕುಸಿದ ಪರಿಣಾಮ, ಬೆಳೆ ವಿಸ್ತೀರ್ಣ ಹೆಚ್ಚಿದರೂ ಉತ್ಪಾದನೆ ಅದಕ್ಕೆ ಅನುಗುಣವಾಗಿ ಏರಿಕೆಯಾಗಿಲ್ಲ. 2021-22ರಲ್ಲಿ ಕರ್ನಾಟಕದಲ್ಲಿ 13.5 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗಿದ್ದರೆ, ಮುಂದಿನ ವರ್ಷ ಅದು 10.2 ಲಕ್ಷ ಟನ್ಗೆ ಇಳಿದಿತ್ತು. ನಂತರ ಸ್ವಲ್ಪ ಚೇತರಿಸಿಕೊಂಡು 2025-26ರಲ್ಲಿ 11.3 ಲಕ್ಷ ಟನ್ ತಲುಪಿದರೂ, ಐದು ವರ್ಷಗಳ ಹಿಂದಿನ ಮಟ್ಟಕ್ಕಿಂತ ಇನ್ನೂ 16 ಶೇಕಡಾ ಕಡಿಮೆ ಇದೆ.

ಅಡಿಕೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಉತ್ಪಾದನೆ ಕಡಿಮೆ ಇದ್ದರೂ ಇಡೀ ದೇಶದಲ್ಲಿ ಅಡಿಕೆ ಕ್ಷೇತ್ರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಐದು ವರ್ಷಗಳಲ್ಲಿ ದೇಶದ ಒಟ್ಟು ಅಡಿಕೆ ಬೆಳೆ ವಿಸ್ತೀರ್ಣದ 71.56 ಶೇಕಡಾ ಹಾಗೂ ಒಟ್ಟು ಉತ್ಪಾದನೆಯ 75.47 ಶೇಕಡಾ ಕರ್ನಾಟಕದ ಪಾಲಾಗಿದೆ.

ಉತ್ಪಾದನೆ ಕಡಿಮೆಯಾಗೋಕೆ ಕಾರಣ ಏನು?

ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಅಡಿಕೆಗೆ ಚುಕ್ಕೆ ರೋಗ, ಹಣ್ಣು ಕೊಳೆ ರೋಗ, ಬೇರು ಹುಳ, ಹೈಬ್ರಿಡ್ ಕುಬ್ಜ ತಳಿಗಳ ಪ್ರೋತ್ಸಾಹ, ಬಹುಬೆಳೆ ಪದ್ಧತಿ ಹಾಗೂ ಹವಾಮಾನದ ವೈಪರೀತ್ಯದಿಂದಾಗಿ ಸಮಸ್ಯೆ ಉದ್ಭವಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !