ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯ ಪ್ರಾಚ್ಯದಲ್ಲಿನ ಯುದ್ಧದ ನಡುವೆಯೂ ಭಾರತವು ತನ್ನವರ ರಕ್ಷಣೆಯಲ್ಲಿ ನಿರತರಾಗಿದ್ದು, ಇರಾನ್ ನಲ್ಲಿ ಸಿಲುಕಿರುವ 550 ಭಾರತೀಯರನ್ನು ಅರ್ಮೇನಿಯಾ ಮೂಲಕ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಭೂ-ಗಡಿ ಮೂಲಕ ಭಾರತೀಯರನ್ನು ಸುರಕ್ಷಿತರಾಗಿ ಸ್ಥಳಾಂತರಿಸಲಾಗಿದ್ದು, ಇದಕ್ಕಾಗಿ ಸಹಾಯ ಮಾಡಿದ ಅರ್ಮೇನಿಯಾ ಸರಕಾರಕ್ಕೆ ಕೇಂದ್ರವು ಅಭಿನಂದನೆ ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ ಎಸ್. ಜೈಶಂಕರ್, ಸಂಘರ್ಷದ ಸಮಯದಲ್ಲೂ ಅರ್ಮೇನಿಯಾ ಸರಕಾರ ಹಾಗು ಅಲ್ಲಿನ ಜನರು ಭಾರತೀಯ ಪ್ರಜೆಗಳನ್ನು ಸುರಕ್ಷಿತರಾಗಿ ಸ್ಥಳಾಂತರಿಸಲು ಸಹಾಯ ಮಾಡಿದ್ದು , ನಿಮ್ಮ ಬೆಂಬಲ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ್ದಾರೆ.
ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾಹಿತಿ ನೀಡುತ್ತಾ, ಅರ್ಮೇನಿಯಾದಲ್ಲಿರುವ 550 ಭಾರತೀಯರಲ್ಲಿ 284 ಮಂದಿ ಧಾರ್ಮಿಕ ಉದ್ದೇಶಗಳಿಗಾಗಿ ಇರಾನ್‌ಗೆ ಪ್ರಯಾಣಿಸಿದವರಾಗಿದ್ದಾರೆ. ಈಗಾಗಲೇ ಕೆಲವು ಮಂದಿ ಭಾರತಕ್ಕೆ ವಾಪಾಸ್ ಆಗಿದ್ದು, ಇನ್ನೂ ಕೆಲವರು ಮುಂದಿನ ದಿನಗಳಲ್ಲಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.



