Friday, December 8, 2023

Latest Posts

ಅಗ್ನಿವೀರ ಸಾವು- ರಾಹುಲ್‌ ಸುಳ್ಳುಗಳನ್ನು ಬೆತ್ತಲಾಗಿಸಿದ ಸೇನೆಯ ವಿವರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಯಾಚಿನ್‌ನಲ್ಲಿ ಮೃತಪಟ್ಟ ಭಾರತೀಯ ಸೇನೆಯ ಅಗ್ನಿವೀರನಿಗೆ ನೀಡಿದ ಆರ್ಥಿಕ ನೆರವಿನ ವಿವರಗಳನ್ನು ಸೈನ್ಯಾಧಿಕಾರಿಗಳು ನೀಡಿದ್ದು, ಪರೋಕ್ಷವಾಗಿ ರಾಹುಲ್‌ ಗಾಂಧಿ ಅವರ ಆರೋಪಗಳನ್ನು ಅಲ್ಲಗಳೆದಂತಾಗಿದೆ.

ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ಅಗ್ನಿವೀರ ಗವಟೆ ಅಕ್ಷಯ್ ಲಕ್ಷ್ಮಣ್ ಅವರ ಕುಟುಂಬಕ್ಕೆ ಸೈನಿಕ ಸೇವೆ ಸಂಬಂಧಿತ ನಿಯಮಗಳ ಅನುಸಾರ ನೀಡಲಾಗುತ್ತಿರುವ ಹಣಕಾಸಿನ ನೆರವಿನ ಬಗ್ಗೆ ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.

ಭಾರತೀಯ ಸೈನ್ಯದ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯವು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, “ಮೃತರ ಕುಟುಂಬಕ್ಕೆ ಬೆಂಬಲವನ್ನು ನೀಡಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುತ್ತೇವೆ. ಮೃತ ಅಗ್ನಿವೀರರ ಕುಟುಂಬದವರಿಗೆ ₹48 ಲಕ್ಷದ ವಿಮಾ ಹಣದ ಮೊತ್ತ (ಇದಕ್ಕೆ ಪ್ರೀಮಿಯಂ ಕಟ್ಟಬೇಕಿಲ್ಲ), ₹44 ಲಕ್ಷ ಪರಿಹಾರ, ಅಗ್ನಿವೀರ್‌ನಿಂದ ಸೇವಾ ನಿಧಿ ಕೊಡುಗೆ (30%) ಮತ್ತು ಸರ್ಕಾರದಿಂದ ಇಷ್ಟೇ ಪ್ರಮಾಣದ ಹೊಂದಾಣಿಕೆಯ ಕೊಡುಗೆ, ಸಂಚಿತ ಬಡ್ಡಿಯೊಂದಿಗೆ ಕೊಡಲಾಗುತ್ತಿದೆʼʼ ಎಂದು ಭಾರತೀಯ ಸೇನೆ ಹೇಳಿದೆ.

ಸೈನಿಕನ ಮರಣ ದಿನಾಂಕದಿಂದ ನಾಲ್ಕು ವರ್ಷಗಳು ಪೂರ್ಣಗೊಳ್ಳುವವರೆಗಿನ ಉಳಿದ ಸೇವಾವಧಿಯ ವೇತನವನ್ನು ಸಹ ಇದು ಒಳಗೊಂಡಿದೆ. ಈ ಪ್ರಕರಣದಲ್ಲಿ ಈ ಮೊತ್ತ ₹13 ಲಕ್ಷಕ್ಕಿಂತ ಹೆಚ್ಚಿದೆ. ಇನ್ನು ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದ ₹8 ಲಕ್ಷ ಹೆಚ್ಚುವರಿ ಕೊಡುಗೆಯನ್ನು ಸಂಬಂಧಿಕರಿಗೆ ನೀಡಲಾಗುತ್ತದೆ. ತಕ್ಷಣದ ಪರಿಹಾರವಾಗಿ ಒದಗಿಸಲು ಸೇನಾಯೋಧರ ಪತ್ನಿಯರ ಕಲ್ಯಾಣ ಸಂಘ (AWWA) ₹30 ಸಾವಿರ ಆರ್ಥಿಕ ನೆರವು ನೀಡುತ್ತಿದೆ ಎಂದು ಸೇನೆ ತಿಳಿಸಿದೆ.

“ಅಗ್ನಿವೀರ್‌ಗಳ ಸೇವಾ ನಿಯಮಗಳ ಪ್ರಕಾರ, ಮರಣಹೊಂದಿದ, ಯುದ್ಧದಲ್ಲಿ ಗಾಯಗೊಂಡವರಿಗೆ ನೀಡಲಾಗುವ ಪರಿಹಾರಗಳು ಸಹ ಇವುಗಳನ್ನು ಒಳಗೊಂಡಿರುತ್ತವೆ: ಕೊಡುಗೆ ರಹಿತ ವಿಮಾ ಮೊತ್ತ ₹48 ಲಕ್ಷ, ಅಗ್ನಿವೀರ್‌ ಸೇವಾ ನಿಧಿ (30%) ಮತ್ತು ಸರ್ಕಾರ ನೀಡುವ ಸಮಾನ ಹೊಂದಾಣಿಕೆಯ ಕೊಡುಗೆ ಮತ್ತು ಅದಕ್ಕೆ ಬಡ್ಡಿ. ಆರ್ಮಿ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ ​​(AWWA) ನಿಂದ ₹30 ಸಾವಿರ ತಕ್ಷಣದ ಆರ್ಥಿಕ ನೆರವು” ಎಂದು ADG PI ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪಗಳ ಬಳಿಕ ಸೇನೆಯು ಈ ಕುರಿತು ಸ್ಪಷ್ಟನೆ ನೀಡಿದೆ. ಅಗ್ನಿವೀರನ ಸಾವಿನ ಕುರಿತಾಗಿ ರಾಹುಲ್‌ ಅವರು ʼಅಗ್ನಿವೀರ್‌ʼ ಅನ್ನು ʼʼಭಾರತದ ವೀರರನ್ನು ಅವಮಾನಿಸುವ ಯೋಜನೆʼʼ ಎಂದು ಕರೆದಿದ್ದರು. ಸಿಯಾಚಿನ್‌ನಲ್ಲಿ ಲಕ್ಷ್ಮಣ್‌ ಅವರ ಸಾವಿನ ಸುದ್ದಿ ಕೇಳಿ ನೋವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಒಬ್ಬ ಯುವಕ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ಆದರೆ ಆತನಿಗೆ ಯಾವುದೇ ಗ್ರಾಚ್ಯುಟಿ ಇಲ್ಲ, ಅವನ ಸೇವೆಗೆ ಯಾವುದೇ ಮಿಲಿಟರಿ ಸೌಲಭ್ಯಗಳಿಲ್ಲ ಮತ್ತು ಹುತಾತ್ಮನಾದ ಅವನ ಕುಟುಂಬಕ್ಕೆ ಪಿಂಚಣಿ ಇಲ್ಲ. ಅಗ್ನಿವೀರ್ ಭಾರತದ ವೀರರನ್ನು ಅವಮಾನಿಸುವ ಯೋಜನೆಯಾಗಿದೆ ಎಂದು ಸಾಮಾಜಿಕ ಮಾ‍ಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಟೀಕಿಸಿದ್ದರು.

ರಾಹುಲ್‌ ಅವರ ಈ ನಡೆ ಅತ್ಯಂತ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಟೀಕಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!