August 6, 2026
Thursday, August 6, 2026
spot_img

ಬೀಗ ಹಾಕಿದ ಮನೆಗೆ ಕನ್ನ ಹಾಕಿದ್ದ ಖದೀಮರ ಬಂಧನ: 58 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಜಪ್ತಿ!

ಹೊಸದಿಗಂತ ದಾವಣಗೆರೆ:

ಜಿಲ್ಲೆಯ ಹರಿಹರದಲ್ಲಿ ಬೀಗ ಹಾಕಿದ್ದ ಮನೆಗೆ ನುಗ್ಗಿ ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಇಬ್ಬರು ಅಂತರ್ಜಿಲ್ಲಾ ಕಳ್ಳರನ್ನು ಹರಿಹರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 58,50,800 ರೂ. ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಶ್ರೀಕಾಂತ (20) ಮತ್ತು ರಮೇಶ (27) ಬಂಧಿತ ಆರೋಪಿಗಳು. ಇವರಲ್ಲಿ ಶ್ರೀಕಾಂತ ವಿರುದ್ಧ ಗದಗ, ಹಾವೇರಿ ಸೇರಿದಂತೆ ವಿವಿಧೆಡೆ ಈಗಾಗಲೇ 6 ಕಳ್ಳತನ ಪ್ರಕರಣಗಳು ಹಾಗೂ ರಮೇಶ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಮೇ 18 ರಂದು ಹರಿಹರದ ಅಮರಾವತಿ ಕಾಲೋನಿಯ ಪರೀಕ್ಷಿತ್ ನಾಯ್ಕ ಎಂಬುವರ ಕುಟುಂಬ ದೇವಸ್ಥಾನಕ್ಕೆ ತೆರಳಿದ್ದಾಗ, ಕಳ್ಳರು ಮನೆಯ ಬೀಗ ಮುರಿದು 481 ಗ್ರಾಂ ಚಿನ್ನ ಹಾಗೂ 10 ಸಾವಿರ ರೂ. ಲೂಟಿ ಮಾಡಿದ್ದರು.

ಘಟನಾ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಅಥವಾ ಪ್ರತ್ಯಕ್ಷ ಸಾಕ್ಷಿಗಳಿಲ್ಲದ ಕಾರಣ ಈ ಕೇಸ್ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಹೆಚ್.ಟಿ. ಶೇಖರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಎಸ್. ಬಸವರಾಜ ನೇತೃತ್ವದ ವಿಶೇಷ ತಂಡ ತನಿಖೆ ಕೈಗೊಂಡಿತ್ತು. ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ.

ಬಂಧಿತರಿಂದ 409.5 ಗ್ರಾಂ ಚಿನ್ನಾಭರಣ, 10 ಸಾವಿರ ನಗದು, ಒಂದು ಬೈಕ್ ಹಾಗೂ 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ ಹಾಗೂ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !