ಅಂತಾರಾಜ್ಯ ದರೋಡೆಕೋರರ ಬಂಧನ: ನಗದು, ಕಾರು ವಶಕ್ಕೆ

ಹೊಸ ದಿಗಂತ ವರದಿ, ಯಲ್ಲಾಪುರ :

ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್‌ ಬಳಿ ಕಾರನ್ನು ಅಡ್ಡಗಟ್ಟಿ, ಕಾರು ಸಮೇತ 2.11 ಕೋಟಿ ರೂ. ದರೋಡೆ ಮಾಡಿದ್ದ ಅಂತಾರಾಜ್ಯ ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಅ.02 ರಂದು ಮಧ್ಯರಾತ್ರಿ 1.30 ರ ಹೊತ್ತಿಗೆ ತಾಲೂಕಿನ ಅರಬೈಲ್‌ ಗ್ರಾಮದ ಬಳಿ ಕೊಲ್ಲಾಪುರದ ಗಡಗ್ಲಾಂಜ್ ನಿವಾಸಿ ನಿಲೇಶ ಪಾಂಡುರಂಗ ನಾಯ್ಕ ಎಂಬುವವರು ಕಾರಿನಲ್ಲಿ ಸಂಚರಿಸುತ್ತಿರವಾಗ 7-8 ಜನರ ತಂಡವೊಂದು ಎರಡು ಕಾರುಗಳಲ್ಲಿ ಬಂದು, ದೂರುದಾರರ ಕಾರನ್ನು ಅಡ್ಡಗಟ್ಟಿ, ಅವರ ಮೇಲೆ ಹಲ್ಲೆ ಮಾಡಿ ಸುಮಾರು 2 ಲಕ್ಷ ಬೆಲೆ ಬಾಳುವ ಸ್ವೀಪ್ ವಿ.ಡಿ.ಐ ಕಾರ್‌, ಕಾರಿನಲ್ಲಿದ್ದ 2,11,86,000 ರೂಪಾಯಿ ಹಣವನ್ನು ಹಾಗೂ ಸುಮಾರು 10,000 ರೂಪಾಯಿ ಬೆಲೆ ಬಾಳುವ ಎರಡು ಮೊಬೈಲ್ ಫೋನಗಳನ್ನು ದರೋಡೆ ಮಾಡಿಕೊಂಡು ಹೋಗಿರುವ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ಬೆನ್ನು ಹತ್ತಿದ ಯಲ್ಲಾಪುರ ಪೊಲೀಸರು, ಕೇರಳದಲ್ಲಿ ತನಿಖೆ ನಡೆಸಿ ಪ್ರಕರಣದಲ್ಲಿ ಆರೋಪಿತರಾದ, ಕೇರಳ ರಾಜ್ಯದ ಕಾಸರಗೋಡ್‌ನ ಮಹ್ಮದ ಕಬೀರ್ ಮೈನುದ್ದೀನ್ ಹಾಜಿ, ಪಾಲಕ್ಕಾಡ ಜಿಲ್ಲೆಯ ಕೋಜಿಕೋಡಿಯ ಸುಭಾಸ್ ರಾಧಾಕೃಷ್ಣನ್‌, ಪಾಲಕ್ಕಾಡ ಜಿಲ್ಲೆಯ ಐಲೂರಿನ ಸಕಯ್ಯಪ್ಪನಚೇರಿಯ ನಿಮೇಶ ವಿಜಯ ಕೃಷ್ಣನ್‌ ಎನ್ನುವ ಮೂವರು ಆರೋಪಿತರನ್ನು ಬಂಧಿಸಿರುತ್ತಾರೆ. ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಹಿಂದ್ರಾ ಮೊರೆಜೋ ಕಾರು, ಮಾರುತಿ ಬ್ರೆಝಾ ಹಾಗೂ ದರೋಡೆ ಮಾಡಿಕೊಂಡು ಹೋದ ಸ್ವೀಪ್ ವಿ.ಡಿ.ಐ ಕಾರ್ ಹಾಗೂ 98.000  ರೂ ಹಣ ಸೇರಿದಂತೆ, ಒಟ್ಟು 19,98,000/- ಬೆಲೆಯ ಸ್ವತ್ತನ್ನು ಜಪ್ತುಪಡಿಸಿಕೊಳ್ಳಲಾಗಿದೆ.

ಇನ್ನುಳಿದ ಆರೋಪಿಗಳು ತಲೆಮರಿಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಎಸ್.ಪಿ. ವಿಷ್ಣುವರ್ದನ್ ಎನ್, ಡಿವೈಎಸ್‌ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸುರೇಶ ಯಳ್ಳೂರ ಇವರ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಮಂಜುನಾಥ ಗೌಡ‌ರ್, ಅಮೀನಸಾಬ್ ಅತ್ತಾರ, ಪ್ರೊ. ಪಿ.ಎಸ್.ಐ ಉದಯ, ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫೀ, ದೀಪಕ್ ನಾಯ್ಕ, ಗಜಾನನ ನಾಯ್ಕ, ಡ್ಯಾನಿ ಪರ್ನಾಂಡೀಸ್, ರಾಜೇಶ ನಾಯಕ, ಪರಶುರಾಮ ಕಾಳೆ, ಪ್ರವೀಣ ಪೂಜಾರ, ಚನ್ನಕೇಶವ, ಗಿರೀಶ, ನಂದೀಶ, ಸಕ್ರಪ್ಪ, ಶೇಷು, ವಿಜಯ ಹಾಗೂ ಮಹಿಳಾ ಸಿಬ್ಬಂದಿ ಶೋಭಾ ನಾಯ್ಕ, ಹಾಗೂ ಸಿ.ಡಿ.ಆರ್ ಸೆಲ್ ವಿಭಾಗದ ಉದಯ, ರಮೇಶ ಹಾಗೂ ಮಡಿಕೇರಿ ಜಿಲ್ಲೆಯ ಸಿಬ್ಬಂದಿ ಯೋಗೇಶ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!