March 25, 2026
Wednesday, March 25, 2026
spot_img

ಟಿ20 ವಿಶ್ವಕಪ್ ಇತಿಹಾಸದಲ್ಲೇ ಭಾರತದ ನಂ.1 ಬೌಲರ್ ಆಗಿ ಹೊರಹೊಮ್ಮಿದ ಅರ್ಷದೀಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 72 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ತಂಡದ ಸಂಘಟಿತ ಆಟ ಈ ಗೆಲುವಿಗೆ ಕಾರಣವಾದರೆ, ವೈಯಕ್ತಿಕ ಸಾಧನೆಯಲ್ಲಿ ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಇಡೀ ಕ್ರಿಕೆಟ್ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ಜಸ್ಪ್ರೀತ್ ಬುಮ್ರಾ (33 ವಿಕೆಟ್) ಹೆಸರಿನಲ್ಲಿತ್ತು. ಆದರೆ ಜಿಂಬಾಬ್ವೆ ವಿರುದ್ಧ 24 ರನ್ ನೀಡಿ 3 ವಿಕೆಟ್ ಕಬಳಿಸಿದ ಅರ್ಷದೀಪ್, ಒಟ್ಟು 35 ವಿಕೆಟ್‌ಗಳೊಂದಿಗೆ ಬುಮ್ರಾರನ್ನು ಹಿಂದಿಕ್ಕಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಕೇವಲ 19 ಪಂದ್ಯಗಳಲ್ಲಿ 14.25ರ ಸರಾಸರಿಯಲ್ಲಿ ಈ ಸಾಧನೆ ಮಾಡಿರುವುದು ಅರ್ಷದೀಪ್ ಅವರ ಕೌಶಲಕ್ಕೆ ಸಾಕ್ಷಿಯಾಗಿದೆ.

ಪಂದ್ಯದ ಆರಂಭಿಕ ಓವರ್‌ಗಳಲ್ಲಿ ವಿಕೆಟ್ ಪಡೆಯಲು ವಿಫಲರಾದರೂ, ಮಧ್ಯಂತರದಲ್ಲಿ ಅರ್ಷದೀಪ್ ಅದ್ಭುತ ಕಮ್‌ಬ್ಯಾಕ್ ಮಾಡಿದರು. ಅಪಾಯಕಾರಿ ಸಿಕಂದರ್ ರಾಜಾ ಮತ್ತು ರಯಾನ್ ಬರ್ಲ್ ಅವರನ್ನು ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟುವ ಮೂಲಕ ಜಿಂಬಾಬ್ವೆಗೆ ಶಾಕ್ ನೀಡಿದರು. ಅಂತಿಮವಾಗಿ ಟೋನಿ ಮುನ್ಯೊಂಗಾ ಅವರನ್ನು ಅಪ್ರತಿಮ ಯಾರ್ಕರ್ ಮೂಲಕ ಬೌಲ್ಡ್ ಮಾಡಿ ಭಾರತದ ಗೆಲುವನ್ನು ಖಚಿತಪಡಿಸಿದರು.

ಅರ್ಷ್‌ದೀಪ್ ಸಿಂಗ್ ಈಗ ಕೇವಲ ವಿಶ್ವಕಪ್‌ನಲ್ಲಿ ಮಾತ್ರವಲ್ಲ, ಒಟ್ಟಾರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಈ ಅಮೋಘ ಪ್ರದರ್ಶನದೊಂದಿಗೆ ಅರ್ಷದೀಪ್ ಸಿಂಗ್ ಭಾರತೀಯ ಕ್ರಿಕೆಟ್‌ನ ನವ ಯುಗದ ಬೌಲಿಂಗ್ ಐಕಾನ್ ಆಗಿ ಹೊರಹೊಮ್ಮುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !