October 10, 2026
Saturday, October 10, 2026
spot_img

ಪವರ್‌ಪ್ಲೇನಲ್ಲಿ ಅರ್ಶ್‌ದೀಪ್ ಪವರ್‌ಫುಲ್ ಇಂಪ್ಯಾಕ್ಟ್: ಮತ್ತೆ ಫಾರ್ಮ್‌ಗೆ ಮರಳಿದ ಎಡಗೈ ವೇಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ವೇಗಿ ಅರ್ಶ್‌ದೀಪ್ ಸಿಂಗ್ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನು ಕಂಗಾಲು ಮಾಡಿದರು. ಪವರ್‌ಪ್ಲೇನಲ್ಲಿ ಸತತ ಎರಡು ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಮುಂಬೈ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.

ಪಂದ್ಯದ ಎರಡನೇ ಓವರ್‌ನಲ್ಲಿ ರಿಯಾನ್ ರಿಕಲ್ಟನ್ ಅವರನ್ನು ಔಟ್ ಮಾಡಿದ ಅರ್ಶ್‌ದೀಪ್, ಐಪಿಎಲ್ ಇತಿಹಾಸದಲ್ಲಿ 100 ವಿಕೆಟ್ ಪೂರೈಸಿದ ಐದನೇ ಎಡಗೈ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಷ್ಟೇ ಅಲ್ಲದೆ, ಪಂಜಾಬ್ ಕಿಂಗ್ಸ್ ಪರ 100 ವಿಕೆಟ್ ಪಡೆದ ಮೊದಲ ವೇಗಿ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

ತಮ್ಮ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ನೀಡಿದ ಅರ್ಶ್‌ದೀಪ್, ಎರಡನೇ ಓವರ್‌ನಲ್ಲಿ ರೌದ್ರಾವತಾರ ತಾಳಿದರು. ಮೊದಲ ಎಸೆತದಲ್ಲಿ ರಿಕಲ್ಟನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರೆ, ಮರು ಎಸೆತದಲ್ಲೇ ಮುಂಬೈನ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಸಂಚಲನ ಮೂಡಿಸಿದರು.

ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್ ಪಡೆಯಲು ತಿಣುಕಾಡುತ್ತಿದ್ದ ಅರ್ಶ್‌ದೀಪ್, ಈ ಪಂದ್ಯದ ಮೂಲಕ ಮತ್ತೆ ಲಯಕ್ಕೆ ಮರಳಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಹಾಗೂ ಐಸಿಸಿ ಟಿ20 ‘ವರ್ಷದ ಕ್ರಿಕೆಟಿಗ’ ಪ್ರಶಸ್ತಿ ಪುರಸ್ಕೃತರಾಗಿರುವ ಇವರು, ವಿಶ್ವಕಪ್‌ನಲ್ಲಿಯೂ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

Must Read