ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದುಗಳ ಅತ್ಯಂತ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲೊಂದಾದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ನೂತನ ಪ್ರಧಾನ ಅರ್ಚಕರಾಗಿ (ಮೇಲ್ಶಾಂತಿ)ಎಸ್.ಅರುಣ್ ಕುಮಾರ್ ನಂಬೂದಿರಿ ಅವರನ್ನು ಆಯ್ಕೆ ಮಾಡಲಾಗಿದೆ.
ಇವರು ಕೊಲ್ಲಂ ಜಿಲ್ಲೆಯ ಶಕ್ತಿಕುಲಂಗಾರ ನಾರಾಯಣೀಯಂನ ತೊಟ್ಟತ್ತಿಲ್ ಮಠಂ ನಿವಾಸಿಯಾಗಿದ್ದಾರೆ.
ಹಾಗೆಯೇ ಮಾಳಿಗಪುರತ್ತಮ್ಮ ಶ್ರೀದೇವಿ ದೇವಾಲಯದ ಪ್ರಧಾನ ಅರ್ಚಕರಾಗಿ ಶ್ರೀ ವಾಸುದೇವನ್ ನಂಬೂದಿರಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಒಲವನ್ನಾದ ತಿರುಮಂಗಲತ್ತು ಇಲ್ಲಂನ ನಿವಾಸಿಯಾಗಿದ್ದಾರೆ. ಈ ನೇಮಕವನ್ನು ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಆಯ್ಕೆ ಮಾಡಿದೆ.
ಉಭಯರೂ ಒಂದು ವರ್ಷ ಕಾಲ ಶಬರಿಮಲೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ. ಅಂತಿಮ ಆಯ್ಕೆ ಪಟ್ಟಿಯಲ್ಲಿದ್ದ ೨೪ ಮಂದಿ ಅರ್ಚಕರಲ್ಲಿ ಅರುಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಪಂದಳಮ್ನ ರಾಜವಂಶದ ಋಷಿಕೇಶ್ ವರ್ಮ ಮತ್ತು ಎಂ.ವೈಷ್ಣವಿ ಅವರು ಆಯ್ಕೆಯ ಚೀಟಿಯನ್ನು ಎತ್ತಿದರು. ಈ ಸಂದರ್ಭ ಟಿಡಿಬಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ,ಸದಸ್ಯರಾದ ಅಜಿಕುಮಾರ್, ಜಿ.ಸುಂದರೇಶನ್, ದೇವಸ್ವಂ ಆಯುಕ್ತ ಸಿ.ವಿ.ಪ್ರಕಾಶ್, ವಿಶೇಷ ಆಯುಕ್ತ ಆರ್.ಜಯಕೃಷ್ಣನ್ , ಹೈಕೋರ್ಟಿನ ವೀಕ್ಷಕರಾದ ಟಿ.ಆರ್.ರಾಮಚಂದ್ರನ್ ನಾಯರ್ , ಶಬರಿಮಲೆ ತಂತ್ರಿವರ್ಯರಾದ ಕಂಠರಾರು ರಾಜೀವರು ಮತ್ತು ತಂತ್ರಿವರ್ಯರಾದ ಬ್ರಹ್ಮದತ್ತನ್ ಅವರು ಉಪಸ್ಥಿತರಿದ್ದರು.