ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ನವೆಂಬರ್ 19) ಬೆಳಗ್ಗೆ ಅರುಣಾಚಲ ಪ್ರದೇಶದ ಇಟಾನಗರಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು 600 ಮೆಗವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಅದಾದ ಬಳಿಕ ಅವರು ಉತ್ತರ ಪ್ರದೇಶದ ವಾರಣಾಸಿಗೆ ತಲುಪಲಿದ್ದಾರೆ. ಅಲ್ಲಿ ಅವರು ಮಧ್ಯಾಹ್ನ 2 ಗಂಟೆಗೆ ‘ಕಾಶಿ ತಮಿಳು ಸಂಗಮಂ’ ಅನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಈಶಾನ್ಯ ಭಾರತದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಪ್ರಮುಖ ಹಂತವಾಗಿ, ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾದ ಇಟಾನಗರದ ದೋನಿ ಪೋಲೋ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ಹೆಸರು ಅರುಣಾಚಲ ಪ್ರದೇಶದ ಸಂಪ್ರದಾಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಸೂರ್ಯ (‘ದೋನಿ’) ಮತ್ತು ಚಂದ್ರ (‘ಪೋಲೋ’) ನ ಹೆಸರನ್ನುಳ್ಳ ವಿಮಾನ ನಿಲ್ದಾಣವು ರಾಜ್ಯದ ಪ್ರಾಚೀನ ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.
ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿರುವ ಈ ವಿಮಾನ ನಿಲ್ದಾಣವನ್ನು 690 ಎಕರೆ ಪ್ರದೇಶದಲ್ಲಿ 640 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 2,300-ಮೀಟರ್ ರನ್‌ವೇ ಹೊಂದಿರುವ ವಿಮಾನ ನಿಲ್ದಾಣವು ಎಲ್ಲಾ ಹವಾಮಾನದಲ್ಲೂ ಕಾರ್ಯಾಚರಣೆಗೆ ಸೂಕ್ತವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಇಂಧನ ದಕ್ಷತೆ, ನವೀಕರಿಸಬಹುದಾದ ಶಕ್ತಿ ಮತ್ತು ಸಂಪನ್ಮೂಲಗಳ ಮರುಬಳಕೆಯನ್ನು ಉತ್ತೇಜಿಸುತ್ತದೆ.
ಇಟಾನಗರದಲ್ಲಿ ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಯು ಈ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿದೆ. ಇದರಿಂದಾಗಿ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ.
ಈ ಕಾರ್ಯಕ್ರಮದ ಬಳಿಕ ಪ್ರಧಾನಮಂತ್ರಿಯವರು 600 ಮೆ.ವ್ಯಾ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ರೂ 8,450 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಅರುಣಾಚಲ ಪ್ರದೇಶವನ್ನು ವಿದ್ಯುತ್ ಸಮೃದ್ಧ ರಾಜ್ಯವನ್ನಾಗಿ ಮಾಡುತ್ತದೆ. ಗ್ರಿಡ್ ಸ್ಥಿರತೆ ಮತ್ತು ಏಕೀಕರಣದ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್‌ಗೆ ಪ್ರಯೋಜನವನ್ನು ನೀಡುತ್ತದೆ. ಹಸಿರು ಶಕ್ತಿಯ ಅಳವಡಿಕೆಯನ್ನು ಹೆಚ್ಚಿಸುವ ದೇಶದ ಬದ್ಧತೆಯ ಈಡೇರಿಕೆಗೆ ಈ ಯೋಜನೆಯು ಪ್ರಮುಖ ರೀತಿಯಲ್ಲಿ ಕೊಡುಗೆ ನೀಡುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ