ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ವಿಧಾನಸಭಾ ಚುನಾವಣೆ ನಿಮಿತ್ತ ಎರಡು ದಿನಗಳ ಪ್ರವಾಸದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೋಮವಾರ ರಾತ್ರಿ ಆಟೋ ಚಾಲಕರೊಬ್ಬರ ಮನೆಯಲ್ಲಿ ಊಟ ಸವಿದರು. ಭದ್ರತಾ ದೃಷ್ಟಿಯಿಂದ ಗುಜರಾತ್ ಪೊಲೀಸರು ಕೇಜ್ರಿವಾಲ್ ಅವರನ್ನು ತಡೆದರೂ ಸಹ ಹೈಡ್ರಾಮಾ ನಡೆಸಿ ಆಟೋ ಚಾಲಕನ ಮನೆ ತಲುಪಿದರು.
ಕೇಜ್ರಿವಾಲ್ ಅವರೊಂದಿಗೆ ಗುಜರಾತ್ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಇಸುದನ್ ಗದ್ವಿ ಕೂಡ ಸಾಥ್ ನೀಡಿದರು. ಕೇಜ್ರಿವಾಲ್‌ಗೆ ಆತಿಥ್ಯ ನೀಡಿದ ಆಟೋ ಚಾಲಕನ ಹೆಸರು ವಿಕ್ರಮ್ ದಾಂತನಿ. ಅಹಮದಾಬಾದ್‌ನ ಘಟ್ಲೋಡಿಯಾ ಪ್ರದೇಶದ ನಿವಾಸಿ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ತನ್ನ ಮನೆಗೆ ಊಟಕ್ಕೆ ಬರಬೇಕೆಂದು ಆಹ್ವಾನವಿತ್ತ ಆಟೋ ಡ್ರೈವರ್ ಮನೆಗೆ ಕೇಜ್ರಿವಾಲ್ ಹಾಗೂ ಇತರೆ ನಾಯಕರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಗುಜರಾತ್ ವಿಧಾನಸಭಾ ಚುನಾವಣೆ ಮೇಲೆ ಗಮನಹರಿಸಿರುವ ಆಪ್ ಅಬ್ಬರದ ಪ್ರಚಾರದಲ್ಲಿ ತೊಡಗಿದೆ. ಕೆಲ ದಿನಗಳ ಹಿಂದೆ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಎಎಪಿ ಗುಜರಾತ್ ನಲ್ಲೂ ನೆಲೆಯೂರುವ ಪ್ರಯತ್ನವನ್ನು ತೀವ್ರಗೊಳಿಸಿದೆ. ತಂತ್ರ ಪ್ರತಿತಂತ್ರಗಳ ಮೂಲಕ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದ್ದಾರೆ.