ಮಹಾರಾಣಾ ಪ್ರತಾಪ್‌ ವಂಶಸ್ಥ ಅರವಿಂದ್ ಸಿಂಗ್ ಮೇವಾರ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್ : 

ಮೇವಾರ್‌ನ ರಾಜಮನೆತನದ ಸದಸ್ಯ ಮತ್ತು HRH ಹೋಟೆಲ್‌ಗಳ ಸಮೂಹದ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಮೇವಾರ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಭಾನುವಾರ ಮುಂಜಾನೆ ಉದಯಪುರದಲ್ಲಿ ನಿಧನರಾದರು ,

ರಜಪೂತ ರಾಜ ಮಹಾರಾಣಾ ಪ್ರತಾಪ್ ಅವರ ವಂಶಸ್ಥರಾದ 81 ವರ್ಷದ ಅರವಿಂದ್ ಸಿಂಗ್ ಮೇವಾರ್ ಉದಯಪುರದ ಸಿಟಿ ಪ್ಯಾಲೇಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಪತ್ನಿ ವಿಜಯರಾಜ್ ಕುಮಾರಿ, ಪುತ್ರ ಲಕ್ಷ್ಯರಾಜ್ ಸಿಂಗ್ ಮೇವಾರ್ ಮತ್ತು ಪುತ್ರಿಯರಾದ ಭಾರ್ಗವಿ ಕುಮಾರಿ ಮೇವಾರ್ ಮತ್ತು ಪದ್ಮಜಾ ಕುಮಾರಿ ಪರ್ಮಾರ್ ಅವರನ್ನು ಅಗಲಿದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅವರ ನಿಧನದ ಹಿನ್ನೆಲೆಯಲ್ಲಿ ಉದಯಪುರ ನಗರ ಅರಮನೆಯು ಭಾನುವಾರ ಮತ್ತು ಸೋಮವಾರ ಪ್ರವಾಸಿಗರಿಗೆ ಮುಚ್ಚಲ್ಪಡುತ್ತದೆ.

ಅರವಿಂದ್ ಸಿಂಗ್ ಮೇವಾರ್ ಯಾರು?
ಅರವಿಂದ್ ಸಿಂಗ್ ಮೇವಾರ್ ಭಗವಂತ್ ಸಿಂಗ್ ಮೇವಾರ್ ಮತ್ತು ಸುಶೀಲಾ ಕುಮಾರ್ ಅವರ ಕಿರಿಯ ಮಗ. ಅರವಿಂದ್ ಅಜ್ಮೀರ್‌ನ ಪ್ರತಿಷ್ಠಿತ ಮೇಯೊ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಯುಕೆ ಮತ್ತು ಅಮೆರಿಕದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಪದವಿ ಪೂರ್ಣಗೊಳಿಸಿದ್ದಾರೆ. ಅವರು HRH ಹೋಟೆಲ್‌ಗಳ ಗುಂಪನ್ನು ವೃತ್ತಿಪರವಾಗಿ ನಿರ್ವಹಿಸುವ ಕಾರ್ಪೊರೇಟ್ ಸಂಸ್ಥೆಯಾಗಿ ನಿರ್ಮಿಸುವ ಮೊದಲು ಹಲವು ವರ್ಷಗಳ ಕಾಲ ಚಿಕಾಗೋದಲ್ಲಿ ವಾಸಿಸುತ್ತಿದ್ದರು. ಒಬ್ಬ ಉತ್ಸಾಹಿ ಕ್ರಿಕೆಟಿಗನಾಗಿದ್ದ ಮೇವಾರ್, 1945-46ರಲ್ಲಿ ರಾಜಸ್ಥಾನದ ನಾಯಕನಾಗಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು ಮತ್ತು ಸುಮಾರು ಎರಡು ದಶಕಗಳ ಕಾಲ ಕ್ರಿಕೆಟ್‌ನಲ್ಲಿ ಗುರುತಿಸಿಕೊಂಡಿದ್ದಾರೆ. 1970 ರ ದಶಕದಲ್ಲಿ ಅವರು ಪೋಲೊ ಆಟಗಾರರಾಗಿದ್ದರು, ನಂತರ ವೈದ್ಯಕೀಯ ಕಾರಣಗಳಿಂದ ಕ್ರೀಡೆಯನ್ನು ತ್ಯಜಿಸಿದರು.

ಮೇವಾರ್‌ ಅವರ ತಂದೆ ಭಾಗವತ್ ಸಿಂಗ್ ಮೇವಾರ್ ಅವರ ಮರಣದ ನಂತರ, ಮೇವಾರ್ ಮನೆಯ ನಾಯಕತ್ವ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅವರ ವಂಶಸ್ಥರ ನಡುವೆ ಘರ್ಷಣೆಗಳು ಮತ್ತು ಸಮಸ್ಯೆಗಳು ಉಂಟಾಗಿದ್ದವು. ಭಗವಂತ್ ಸಿಂಗ್ ತನ್ನ ಆಸ್ತಿಯನ್ನು ಟ್ರಸ್ಟ್ ಮೂಲಕ ಅರವಿಂದ್‌ಗೆ ವಿಲ್ ಮಾಡಿ, ಅರವಿಂದ್‌ ಸಿಂಗ್‌ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ಘೋಷಿಸಿದ್ದರು. ಹಿರಿಯ ಮಗನಾಗಿದ್ದ ಮಹೇಂದ್ರ ಸಿಂಗ್ ಮೇವಾರ್ ಕುಟುಂಬದ ನಾಮಮಾತ್ರದ ಮುಖ್ಯಸ್ಥರಾಗಿ ಪಟ್ಟಾಭಿಷೇಕ ಮಾಡಲಾಯಿತು. ಮಹೇಂದ್ರ ಸಿಂಗ್ ಮೇವಾರ್ ಕಳೆದ ವರ್ಷ ನವೆಂಬರ್‌ನಲ್ಲಿ ನಿಧನರಾದರು ಮತ್ತು ಅವರ ಮಗ, ಬಿಜೆಪಿ ಶಾಸಕ ವಿಶ್ವರಾಜ್ ಸಿಂಗ್ ಮೇವಾರ್ ಅವರನ್ನು ಕುಟುಂಬದ ನಾಮಮಾತ್ರ ಮುಖ್ಯಸ್ಥರನ್ನಾಗಿ ಮಾಡಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!