ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸತತ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸುನೀತಾ ವಿಲಿಯಮ್ಸ್ ಕಾದು ಕುಳಿತಿದ್ದರು. ಕೊನೆಗೂ ಆ ಕಾತರ, ಕುತೂಹಲ, ಕಾಯುವಿಕೆಯ ಸಮಯ ಬಂದೇ ಬಿಟ್ಟಿದೆ. ಇಂದು ಬೆಳಗ್ಗೆ NASA-SpaceX Crew-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದೆ.
ಭಾರತೀಯ ಕಾಲಮಾನ ಇಂದು ಬೆಳಗ್ಗೆ 9.40ಕ್ಕೆ NASA-SpaceXನಲ್ಲಿ ಪ್ರಯಾಣಿಸಿದ ಕ್ರ್ಯೂ 10 ಸದಸ್ಯರು ಅಂತಾರಾಷ್ಟ್ರ ಬಾಹ್ಯಾಕಾಶವನ್ನು ತಲುಪಿದ್ದಾರೆ. ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಸ್ಪೇಸ್ ಕ್ರ್ಯಾಫ್ಟ್ ISSಗೆ ತಲುಪಿದ್ದು, ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ ಮೋರ್ ಸಂಭ್ರಮದಿಂದ ಸ್ವಾಗತ ಮಾಡಿದ್ದಾರೆ.
NASA-SpaceX Crew-10 ಮಿಷನ್‌ನಲ್ಲಿ ಒಟ್ಟು 4 ಗಗನಯಾತ್ರಿಗಳು ಭಾಗಿಯಾಗಿದ್ದಾರೆ. ನಾಸಾದಿಂದ ಆ್ಯನೆ ಮೆಕ್ಲೇನ್, ನಿಕೋಲ್ ಆಯರ್ಸ್, ಜಪಾನ್‌ನ ತಕುಯಾ ಓನಿಷಿ ಮತ್ತು ರಷ್ಯಾದ ಕಿರಿಲ್ ಟೆಸ್ಕಾವ್ ISS ನಿಲ್ದಾಣವನ್ನು ತಲುಪಿದ್ದಾರೆ.
ಬಾಹ್ಯಾಕಾಶದಲ್ಲಿ ಪರಿಭ್ರಮಿಸುತ್ತಿರುವ ಐಎಸ್ಎಸ್ನಲ್ಲಿ ಕಳೆದ ಒಂಬತ್ತು ತಿಂಗಳುಗಳಿಂದ ಸಿಕ್ಕಿಬಿದ್ದಿರುವ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಭೂಮಿಗೆ ಮರಳಿ ಕರೆತರಲು ಈ ಕಾರ್ಯಾಚರಣೆ ಅನುವು ಮಾಡಿಕೊಡಲಿದೆ.
ಶುಕ್ರವಾರ ಸಂಜೆ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಕ್ರೂ-10 ಗಗನಯಾತ್ರಿಗಳ ಸ್ಪೇಸ್ಎಕ್ಸ್ ಕ್ರೂ ಡ್ರ್ಯಾಗನ್ ಕ್ಯಾಪ್ಸೂಲ್ ಸುಮಾರು 29 ಗಂಟೆಗಳ ನಂತರ ಭಾನುವಾರ ಬೆಳಿಗ್ಗೆ ತಲುಪಿದೆ.
ಸದ್ಯ ಅನುಭವಿ ಗಗನಯಾತ್ರಿ ಹಾಗೂ ನಿವೃತ್ತ ನೌಕಾ ಪರೀಕ್ಷಾ ಪೈಲಟ್ಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್ ಸೇರಿದಂತೆ 7 ಜನ ಐಎಸ್ಎಸ್ನಲ್ಲಿದ್ದಾರೆ. ಈ ಹಿಂದೆ ಬೋಯಿಂಗ್ನ ಸ್ಟಾರ್ ಲೈನರ್ ಕ್ಯಾಪ್ಸೂಲ್ನಲ್ಲಿನ ಸಮಸ್ಯೆಗಳಿಂದಾಗಿ ವಿಲ್ಮೋರ್ ಮತ್ತು ಬುಚ್ ಅವರನ್ನು ಭೂಮಿಗೆ ಮರಳಿ ಕರೆ ತರಲು ಸಾಧ್ಯವಾಗಿರಲಿಲ್ಲ.
ಕ್ರೂ-10 ಮಿಷನ್ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಮತ್ತೆ ಭೂಮಿಗೆ ಕರೆತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಅಮೆರಿಕದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೊವ್ ಅವರೊಂದಿಗೆ ಈ ಜೋಡಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಐಎಸ್ಎಸ್ನಿಂದ ಭೂಮಿಯತ್ತ ಹೊರಡಲಿದೆ.
ಕ್ರೂ-10 ಸಿಬ್ಬಂದಿಯ ಪೈಕಿ ಅಮೆರಿಕದ ಅನ್ನೆ ಮೆಕ್ ಲೈನ್ ಮತ್ತು ನಿಕೋಲ್ ಅಯರ್ಸ್, ಜಪಾನ್‌ನ ಟಕುಯಾ ಒನಿಶಿ ಮತ್ತು ರಷ್ಯಾದ ಕಿರಿಲ್ ಪೆಸ್ಕೊವ್ ಮುಂದಿನ ಸುಮಾರು ಆರು ತಿಂಗಳ ಕಾಲ ಐಎಸ್ಎಸ್ನಲ್ಲಿಯೇ ಉಳಿಯಲಿದ್ದಾರೆ.
NASA-SpaceX Crew-10 ಸದಸ್ಯರು ISS ತಲುಪುತ್ತಿದ್ದಂತೆ ಸೆಲೆಬ್ರೇಷನ್ ಮಾಡಲಾಗಿದೆ. ಸುನಿತಾ ವಿಲಿಯಮ್ಸ್ ಸೇರಿ ಎಲ್ಲಾ ಗಗನಯಾತ್ರಿಗಳು ಗ್ರೂಪ್ ಫೋಟೋಗೆ ಪೋಸ್ ಕೊಟ್ಟಿದ್ದು, ಸಂತಸದ ಈ ಕ್ಷಣಗಳ ವಿಡಿಯೋವನ್ನು ನಾಸಾ ಹಂಚಿಕೊಂಡಿದೆ.