ಹೊಸದಿಗಂತ ವರದಿ, ಹಾಸನ :
ಹಾಸನಾಂಬೆ ಉತ್ಸವದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದೀರಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿ ಅಧಿಕಾರಿಗಳಿಗೆ ಒಂದು ನಿಯಮ, ಸಾರ್ವಜನಿಕರಿಗೆ ಒಂದು ನಿಯಮವಾಗಿದೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ನಮ್ಮನ್ನೆ ನಿರ್ಲಕ್ಷ್ಯ ಮಾಡಿದ್ದೀರಿ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರ ವಿರುದ್ಧ ಸ್ಥಳೀಯ ಶಾಸಕ ಎಚ್.ಪಿ ಸ್ವರೂಪ್ ಅಸಮಧಾನ ಹೊರಹಾಕಿದರು.
ಹಾಸನಾಂಬ ಉತ್ಸವ ಮೂರನೆ ದಿನಕ್ಕೆ ಕಾಲಿಟ್ಟಿದ್ದು, ಉತ್ಸವದ ನಿರ್ವಹಣೆಯ ಜವಬ್ದಾರಿಯನ್ನು ಹೊಂದಿರುವ ಜಿಲ್ಲಾಧಿಕಾರಿ ಸತ್ಯಭಾಮ ನಡೆಗೆ ಶಾಸಕ ಸ್ವರೂಪ್ ಪ್ರಕಾಶ್ ಆಕ್ರೋಶ ಹೊರಹಾಕಿದರು. ಹಾಸನಾಂಬ ದೇವಾಲಯದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಏಕಪಕ್ಷೀಯ ಆಡಳಿತ ನಡೆಸುತ್ತಿದ್ದಾರೆ. ಶಾಸಕರನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ. ಕಳಸ ಪ್ರತಿಷ್ಠಾಪನೆ, ಹೆಲಿ ಟೂರಿಸಂ, ಪ್ಯಾರಾಗ್ಲೈಡಿಂಗ್ ಸೇರಿದಂತೆ ಎಲ್ಲವನ್ನೂ ಜಿಲ್ಲಾಧಿಕಾರಿ ಸತ್ಯಭಾವರೇ ಚಾಲನೆ ನೀಡಿದ್ದಾರೆ. ಈ ಬಾರಿ ಹಾಸನಾಂಬ ಉತ್ಸವ ಆಗಿಲ್ಲ, ಸತ್ಯಭಾಮ ಉತ್ಸವ ಆಗಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ದೇಗುಲದ ಮುಂಭಾಗ ಕಿರಿಕಾರಿದರು.
ದೇವಾಯದ ಕಳಸ ಪ್ರತಿಷ್ಠಾಪನೆಗೆ ಯಾಕೆ ಕರೆದಿಲ್ಲ? ನಾವೇನು ದನ ಕಾಯೋಕೆ ಇದ್ದೀವಾ. ಕುಟುಂಬದವರೊಂದಿಗೆ ಕಳಸ ಪ್ರತಿಷ್ಠಾಪನೆ ಮಾಡಿದ್ದೀರಿ, ಹೆಲಿ ಟೂರಿಸಂಗೆ ಚಾಲನೆ ನೀಡಿದ್ದೀರಿ ನಮ್ಮನ್ನ ಕಡೆಗಣಿಸಿದ್ದೀರಿ. ತಮ್ಮ ಕುಟುಂಬದ ಕಾರ್ಯಕ್ರಮದಂತೆ ನೀವು ನಿಮ್ಮ ಪತಿ ಕೂತುಕೊಂಡು ಹೇಗೆ ಹೋಮ ಮಾಡಿದ್ದೀರಿ? ಎಂದು ಡಿಸಿಗೆ ಪ್ರಶ್ನೆಗಳ ಸುರಿಮಳೆಗೈದು, ಯಾವುದಕ್ಕು ಶಾಸಕರನ್ನು ಸೌಜನ್ಯಕ್ಕಾದರೂ ಕರೆದಿಲ್ಲ ಎಂದು ಆಕ್ರೋಶ ಹೊರಹಾಕಿದರು.
24 ಗಂಟೆಯು ಹಾಸನಾಂಬೆ ದರ್ಶನ
ಶನಿವಾರ ಆಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು, ಕಿ.ಮೀ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಶನಿವಾರದಿಂದ 24 ಗಂಟೆಯು ಹಾಸನಾಂಬೆ ದರ್ಶನ ಭಾಗ್ಯ ಇರಲಿದೆ. ಮಧ್ಯಾಹ್ನ 1-30 ರಿಂದ 3, ಮುಂಜಾನೆ 2 ರಿಂದ 4 ನೈವೇದ್ಯ ಪೂಜೆಗೆ ಬಿಡುವು ಇರಲಿದೆ. ನೈವೇದ್ಯ ಅವಧಿ ಹೊರತು ಪಡಿಸಿ ಉಳಿದ ಸಮಯದಲ್ಲಿ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.