Sunday, December 3, 2023

Latest Posts

ಬರ ವೀಕ್ಷಣೆ ನಾಟಕಕ್ಕೆ ಕಾಂಗ್ರೆಸ್ ಸರಕಾರ ಸಿದ್ಧ: ಡಾ. ಸಿ.ಎನ್.ಅಶ್ವತ್ಥ್ಥನಾರಾಯಣ್ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಬಿಜೆಪಿಯವರು ಬರಪ್ರದೇಶ ವೀಕ್ಷಿಸಲು ಜನರ ಬಳಿ ಹೋಗುವುದನ್ನು ಗಮನಿಸಿದ ಬಳಿಕ ಕಾಂಗ್ರೆಸ್ ಶಾಸಕರು, ಮುಖ್ಯಮಂತ್ರಿಯವರಿಗೆ ಜ್ಞಾನೋದಯವಾಗಿದೆ. ಜನರು ಬೈಯುವ, ಹೀಯಾಳಿಸುವ ಭಯದಿಂದ ಬರ ವೀಕ್ಷಣೆ ನಾಟಕ ಮಾಡಲು ಸರಕಾರ ಮುಂದಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ಥನಾರಾಯಣ್ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೈತರಿಗಾಗಿ 17 ಯೋಜನೆಗಳನ್ನು ಬಿಜೆಪಿ ಸರಕಾರ ಕೊಟ್ಟಿತ್ತು. ಅದೆಲ್ಲವನ್ನೂ ಹಿಂಪಡೆದ ಕೀರ್ತಿ ಸನ್ಮಾನ್ಯ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಇವರು ಸಂಪೂರ್ಣ ರೈತವಿರೋಧಿಗಳು ಎಂದು ಆರೋಪಿಸಿದರು.

ಸರಕಾರ ಕೂಡಲೇ ಹಣ ಬಿಡುಗಡೆ ಮಾಡಿ ಬರ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು. ಕೇಂದ್ರದಿಂದ ಎನ್‍ಡಿಆರ್‍ಎಫ್ ನಿಯಮಾವಳಿಯಡಿ ಬರಬೇಕಾದ ಹಣ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗ 300 ಕೋಟಿ ಕೊಟ್ಟಿದ್ದಾರೆ. ಮುಂದೆಯೂ ಹಣ ಬಿಡುಗಡೆ ಆಗಲಿದೆ. ಆದರೆ, ಮುಂದಿನ ಏಪ್ರಿಲ್ ತನಕ ನಿಮ್ಮ ಕಾರ್ಯಯೋಜನೆ ಏನು ಎಂದು ಸರಕಾರವನ್ನು ಪ್ರಶ್ನಿಸಿದರು.
ರೈತರ ಸಾಲಮನ್ನಾದ ಒಂದೇ ಒಂದು ಮಾತನಾಡಿಲ್ಲ. 7 ಗಂಟೆ ಕರೆಂಟ್ ಕೊಡುವುದಾಗಿ ಹೇಳಿಲ್ಲ. ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಿಗೆ ಆತ್ಮವಿಶ್ವಾಸ ತುಂಬುವ ಮಾತನಾಡಿಲ್ಲ ಎಂದು ಟೀಕಿಸಿದರು. ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸಚಿವರು ಹೇಳುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಿಎಂ ಸ್ಥಾನದ ಕುರಿತು ಒಳಜಗಳ ಮುಂದುವರೆದಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿಗಳು ಬರ ಸಂಬಂಧ ಪ್ರವಾಸ ಮಾಡುತ್ತಿಲ್ಲ. ಅತಿವೃಷ್ಟಿ- ಅನಾವೃಷ್ಟಿ ನಡುವೆಯೂ 2013-18ರ ಅವಧಿಯಲ್ಲಿ ಅವರು ಪ್ರವಾಸ ಮಾಡಿರಲಿಲ್ಲ. ಈಗಲೂ ಪ್ರವಾಸ ಮಾಡಿಲ್ಲ. ಬಿಜೆಪಿಯವರು ಪ್ರವಾಸ ಮಾಡುವುದನ್ನು ತಮಾಷೆ ಮಾಡುತ್ತಾರೆ ಎಂದು ಆಕ್ಷೇಪಿಸಿದರು.

ಬರದಲ್ಲಿ ಸಂಕಷ್ಟದಲ್ಲಿರುವ ರೈತರು, ನಾಗರಿಕರು, ದನಕರುಗಳಿಗೆ ಬೇಕಾದ ಮೇವು ಮತ್ತಿತರ ಸೌಲಭ್ಯ ಕೊಟ್ಟಿಲ್ಲ. ಲೋಡ್ ಶೆಡ್ಡಿಂಗ್ ಮಾಡಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗ್ಯಾರಂಟಿಗಳು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂದು ಆಕ್ಷೇಪಿಸಿದ ಅವರು, ಬಸ್ಸಿನದೇನೋ ನಡೆದಿದೆ. ನಿಗಮಗಳು ಮುಚ್ಚಿ ಹೋಗಲಿದೆಯೋ ಗೊತ್ತಿಲ್ಲ ಎಂದರು. ರಾಜ್ಯದಲ್ಲಿ ಸರಕಾರ ಇದೆಯೋ ಎಂಬ ಅನುಮಾನ ಇದೆ. ನಾನು ಸಿಎಂ ಆಗಿ ಐದು ವರ್ಷ, ನಾನು ಎರಡೂವರೆ ವರ್ಷ,ನಾನು ಒಂದು ವರ್ಷ ಎಂದು ತಮಾಷೆ ಮಾಡುತ್ತಿದ್ದಾರೆ. ಹೊಡೆದಾಟ, ಜಗಳ ಮುಂದುವರೆದಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿನಲ್ಲಿ ಗುಂಪುಗಾರಿಕೆ ಮುಂದುವರೆದಿದೆ. ಚುನಾವಣೆಗೆ ಹಣ ಕೊಡುವ ಎಟಿಎಂ ಸರಕಾರ ಇಲ್ಲಿದೆ. ಹಣ ಲೂಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಫಂಡಿಂಗ್ ಮಾಡುತ್ತಿದ್ದಾರೆ. ಎಲ್ಲ ಕಡೆ ಹಣ ಸಿಗುತ್ತಿದೆ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ತೆಲಂಗಾಣ ಮತ್ತಿತರ ಕಡೆ ಹಣ ಸಿಕ್ಕಿದೆ ಎಂದು ವಿವರಿಸಿದರು. ಕಾಂಗ್ರೆಸ್ ಪಕ್ಷದವರು ಅಧಿಕಾರಕ್ಕಾಗಿ ಕೀಳು ಮಟ್ಟಕ್ಕೆ ಇಳಿಯುತ್ತಾರೆ. ಭ್ರಷ್ಟಾಚಾರ ಮಾಡುತ್ತಾರೆ ಎಂದು ದೂರಿದರು. ಜೆಡಿಎಸ್ ಈಗ ಎನ್‍ಡಿಎ ಮೈತ್ರಿಕೂಟ ಸೇರಿದೆ. ಸೀಟು ಹಂಚಿಕೆ ಕುರಿತು ಮಾಹಿತಿ ಇಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಛತ್ತೀಸಗಡ ಕಾಂಗ್ರೆಸ್ ಸರಕಾರದ ಸಿಎಂ ಭೂಪೇಶ್ ಬಘೇಲ್ ಅವರು ಆನ್‍ಲೈನ್ ಮೂಲಕ ಕಿಕ್‍ಬ್ಯಾಕ್ ರೂಪದಲ್ಲಿ 508 ಕೋಟಿ ರೂ. ಪಡೆದ ಆರೋಪವಿದೆ. 400 ಕೋಟಿಗೂ ಹೆಚ್ಚು ಹಣ ಲಭಿಸಿದೆ. ಮಹಾದೇವನ ಹೆಸರಿನಲ್ಲಿ ಕಾನೂನು ಉಲ್ಲಂಘಿಸಿ ವ್ಯವಸ್ಥೆಯ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಮಾಯಕರನ್ನು ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಕರ್ನಾಟಕ ಸೇರಿ ದೇಶದ ಉದ್ದಗಲಕ್ಕೆ ಎಟಿಎಂ ಸರಕಾರವಾಗಿದೆ. ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.

ಇದೆಲ್ಲದಕ್ಕೂ ಉತ್ತರ ನೀಡಲು ರಾಹುಲ್ ಗಾಂಧಿಯವರಿಗೆ ಧ್ವನಿ ಇಲ್ಲ. ಕಾಂಗ್ರೆಸ್ ಪಕ್ಷದ ಸರಕಾರಗಳು ಅಧಿಕಾರ ದುರ್ಬಳಕೆ, ಜನವಿರೋಧಿಯಾಗಿ ಕೆಲಸ ಮಾಡಿವೆ ಎಂದು ಅವರು ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!