ಹೊಸ ದಿಗಂತ ವರದಿ, ಕುಮಟಾ :
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ನನಗೆ ಟಿಕೇಟ್ ನೀಡದೇ ನಿವೇದಿತ ಆಳ್ವಾ ಅವರಿಗೆ
ನೀಡಿರುವುದರಿಂದ ಪಕ್ಷದ ಮೇಲಿನ ವಿಶ್ವಾಸ ಕಳೆದು ಹೋಗಿದೆ. ಇದರಿಂದ ಬೇಸರಗೊಂಡಿದರುವ ಕಾರ್ಯಕರ್ತರು ಮತ್ತು
ದಿ.ಮೋಹನ ಶೆಟ್ಟಿ ಅಭಿಮಾನಿಗಳ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಂಡಿದ್ದೇನೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಹೇಳಿದರು.
ಭಾನುವಾರ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಟ್ಟಿ, 2 ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ದಿ. ಮೋಹನ ಶೆಟ್ಟಿ ಮಾಡಿದ್ದರು.
ಅವರ ನಿಧನದ ಬಳಿಕ ಪಕ್ಷ ನನಗೆ ಅವಕಾಶ ನೀಡಿದಾಗ ಗೆದ್ದಿದ್ದೇನೆ, ಹೆಚ್ಚಿನ ಅಭಿವೃದ್ಧಿ ಮಾಡಿದ್ದೇನೆ. ಹೊನ್ನಾವರದ ಪರೇಶ ಮೇಸ್ತ ಸಾವಿನಿಂದಾಗಿ ಚುನಾವಣೆ ಸೋತರೂ ಕಳೆದ 5 ವರ್ಷ ಪೂರ್ತಿ ಪಕ್ಷದ ಕಾರ್ಯಕ್ರಮಗಳು ಹಾಗೂ ಸಂಘಟನೆ ಮಾಡಿಕೊಂಡೇ ಬಂದಿದ್ದೇನೆ. ಕುಮಟಾ-ಹೊನ್ನಾವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಅದನ್ನು ರಾಜ್ಯ ನಾಯಕರು ಹಾಳು ಮಾಡಲು ಹೊರಟಿದ್ದಾರೆ. ಹೊರಗಿನ ವ್ಯಕ್ತಿಯನ್ನು ಅಭ್ಯರ್ಥಿಯಾಗಿ ಘೋಷಿಸಿ, ನನಗೆ ಅನ್ಯಾಯ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಮಾತನಾಡಿ, ನಿವೇದಿತಾ ಆಳ್ವಾ ಅವರಿಗೆ ಮುಂಬರುವ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ನೀಡಿದ್ದು, ಕುಮಟಾ ತಾಲೂಕಿನಾಧ್ಯಂತ ಪಕ್ಷದ ನಿರ್ಣಯದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ, ಪಕ್ಷವನ್ನ ಕಟ್ಟಿ ಬೆಳೆಸಿ ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ನಿರಂತರ ಭಾಗಿಯಾಗಿರುವ ಮಾಜಿ ಶಾಸಕಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಅನ್ಯಾಯವಾಗಿ ಟಿಕೆಟ್ ವಂಚಿಸಲಾಗಿದ್ದು, ಪಕ್ಷದ ಕಾರ್ಯಕರ್ತರ ಆಶಯದಂತೆ ನಾನು ರಾಜಿನಾಮೆ ಸಲ್ಲಿಸಿದ್ದೇನೆ ಅಲ್ಲದೆ ಪಕ್ಷದ ಹಲವು ಪ್ರಮುಖ ಪದಾಧಿಕಾರಿಗಳು ರಾಜಿನಾಮೆ ಸಲ್ಲಿಸಿದ್ದಾರೆ ಎಂದರು.
ಕಾಂಗ್ರೆಸ್ ಸೇವಾದಳ ತಾಲೂಕಾಧ್ಯಕ್ಷ ನಿತ್ಯಾನಂದ ನಾಯ್ಕ, ಬ್ರಿಗೇಡ್ ಸೇವಾದಳ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಕ್ಷಯ ನಾಯ್ಕ, ಕಾರ್ಮಿಕ ವಿಭಾಗದ ಮನೋಜ ನಾಯ್ಕ ತೊರ್ಕೆ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾಯ್ಕ ಬರ್ಗಿ, ತಾಲೂಕಾಧ್ಯಕ್ಷ ವಿಜಯ ವೆರ್ಣೇಕರ, ಪ್ರಚಾರ ಸಮಿತಿ ಸಂಚಾಲಕಿ ತಾರಾ ಗೌಡ, ಮಹಿಳಾ ತಾಲೂಕಾಧ್ಯಕ್ಷ ಸುರೇಖಾ ವಾರೇಕರ, ಹಿಂದುಳಿದ ವರ್ಗಗಳ ವಿಭಾಗದ ತಾಲೂಕಾಧ್ಯಕ್ಷ ಹನುಮಂತ ಪಟಗಾರ ಸೇರಿದಂತೆ 22 ಘಟಕಾಧ್ಯಕ್ಷರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು.
ಪ್ರಮುಖರಾದ ಮಧುಸೂದನ ಶೇಟ್, ಕೃಷ್ಣಾನಂದ ವೆರ್ಣೇಕರ, ಎಸ್.ಎಂ.ಭಟ್ಟ ಇತರರು ಇದ್ದರು.