ಹಿಂದುಗಳಾದ ನಾವು ಸದಾ ಒಂದಾಗಿರಬೇಕು: ನೀರಜ್ ದೋನೆರಿಯಾ

ಹೊಸದಿಗಂತ ವರದಿ, ಚಿತ್ರದುರ್ಗ
ನಾವು ಹಿಂದುಗಳು ನಾವೆಲ್ಲಾ ಎಂದೆಂದಿಗೂ ಒಂದಾಗಿರಬೇಕು. ಬಿಡಿ ಬಿಡಿಯಾದರೆ ಬಲವಿಲ್ಲ.  ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾವೆಲ್ಲಾ ಸಂಘಟನೆಯಾಗಬೇಕು ಎಂದು ಭಂಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಕರೆ ನೀಡಿದರು.
ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ನಡೆಯುತ್ತಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯ ಅಂಗವಾಗಿ ಗಣಪತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಿಂದು ಸಮಾಜವನ್ನು ಕೆಣಕುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ನಾವು ತಕ್ಕ ಉತ್ತರವನ್ನು ನೀಡಬೇಕು. ಹಿಂದು ಸಾಮ್ರಾಜ್ಯ ಪುರಾತನವಾದ ಸಾಮ್ರಾಜ್ಯ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಇದನ್ನು ನಾವು ಮರೆಯಬಾರದು. ಭಾರತದಲ್ಲಿ ಹಿಂದುಗಳಿಗೆ ಮಾನ್ಯತೆ ದೂರೆಯಬೇಕಿದೆ. ನಮ್ಮನ್ನಾಳಿದ ಶ್ರೀರಾಮನ ದೇವಾಲಯವನ್ನು ಆಯೋದ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ನಮ್ಮ ಹೆಮ್ಮೆಯ ಸಂಕೇತ ಎಂದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದು ಮಹಾ ಗಣಪತಿಯ ಈ ಶೋಭಾಯಾತ್ರೆ ಅತಿದೊಡ್ಡ ಶೋಭಾಯಾತ್ರೆ. ಇದು ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಉತ್ತಮ ಕಾರ್ಯ ಮಾಡಿದೆ. ಅಪಾರ ಪ್ರಮಾಣದ ಜನರನ್ನು ಸೇರಿಸುವ ಮೂಲಕ ಸನಾತನ ಧರ್ಮದ ಮಹತ್ವವನ್ನು ಸಾರುತ್ತಿದೆ. ಇದು ಹೀಗೆ ಮುಂದುವರಿಯಬೇಕು. ಇಲ್ಲಿ ಮಠಗಳು ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಎಲ್ಲಾ ಮಠಾಧೀಶರ ಆರ್ಶೀವಾದ ನಮ್ಮೆಲ್ಲರ ಮೇಲಿದೆ. ಇದರಿಂದ ನಮ್ಮ ಸನಾತನ ಧರ್ಮ ಗಟ್ಟಿಯಾಗಿ ನಿಂತಿದೆ ಎಂದು ಹೇಳಿದರು.
 ಹಿಂದುಗಳು ಸಂಕಲ್ಪ ಮಾಡಿದರೆ ಎಂತಹ ಕಠಿಣ ಕಾರ್ಯವಾದರೂ ಮಾಡಿ ಮುಗಿಸುತ್ತಾರೆ. ಇದಕ್ಕೆ ಅಯೋಧ್ಯೆಯಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರ ಉತ್ತಮ ಉದಾಹರಣೆ. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ತೆಗೆದುಹಾಕಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಈಗ ಅದನ್ನು ರದ್ದು ಮಾಡಲಾಗಿದೆ. ಅಲ್ಲಿನ ಲಾಲ್‌ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ. ಭಯೋತ್ಪಾದನೆಗೆ ಕಡಿವಾಣ ಬಿದ್ದಿದ್ದು, ಅಲ್ಲಿನ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಂತವೀರ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ವಾಲ್ಮೀಕಿ ಸ್ವಾಮೀಜಿ, ಕೇತೇಶ್ವರ ಸ್ವಾಮೀಜಿ, ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಸಿ.ವಿರೇಂದ್ರ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಸಭಾ ಅಧ್ಯಕ್ಷರಾದ ಸುಮಿತಾ ರಾಘವೇಂದ್ರ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಷಡಾಕ್ಷರಪ್ಪ, ಆಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಕಾರ್ತಿಕ್, ೨೦೨೪ರ ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ನಯನ, ಮಾರ್ಗದರ್ಶಕರಾದ ಬದರಿನಾಥ್, ಕೇಶವ್, ಪ್ರಭಂಜನ್ ಸೇರಿದಂತೆ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಭಂಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಗಣಪತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!