ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಕುಂಭಮೇಳವೆಂದೆ ಪ್ರಖ್ಯಾತಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಾಡಿನ ಅನೇಕ ಭಕ್ತರು ವಿವಿಧ ವಿಶಿಷ್ಟ ಭಕ್ತಿ ಸೇವೆಗಳನ್ನು ಸಲ್ಲಿಸುತ್ತಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ವಿಜಯಕುಮಾರ್ ಹಾಗೂ ಗೆಳೆಯರ ಬಳಗದ ಹತ್ತು ಜನರ ತಂಡ ನಿರಂತರವಾಗಿ ಸಮಾಜ ಸೇವೆ ಕಾರ್ಯವನ್ನು ಮಾಡುತ್ತಿದ್ದು, ಪ್ರತಿ ವರ್ಷವೂ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೆಳೆಯರ ಬಳಗ ವಿಶೇಷವಾಗಿ ಮಹಾದಾಸೋಹಕ್ಕೆ ಸೇವೆಯನ್ನು ಸಲ್ಲಿಸುತ್ತಿದೆ.
ಬುಧವಾರ ಜನವರಿ15 ರಥೋತ್ಸವ ಹಾಗೂ 16ರಿಂದ ಎರಡು ದಿನಗಳ ಕಾಲ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ಜಿಲೇಬಿಯನ್ನು ತಯಾರು ಮಾಡಿ ಬಡಿಸುವ ಸೇವಾ ಕೈಂಕರ್ಯಕ್ಕೆ ಮುಂದಾಗಿದೆ. ಈ ತಂಡ ಈಗಾಗಲೇ ಜಿಲೇಬಿ ತಯಾರು ಮಾಡುವ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಜಿಲೇಬಿ ತಯಾರಿಕೆಗೆ ಸುಮಾರು 50 ಕ್ವಿಂಟಲ್ ಮೈದಾ ಹಿಟ್ಟು, 130 ಕ್ವಿಂಟಲ್ ಸಾವಯವ ಬೆಲ್ಲ, 1600 ಲೀಟರ್ ಎಣ್ಣೆ, 300 ಲೀಟರ್ ತುಪ್ಪ, 20 ಕೆಜಿ ಯಾಲಕ್ಕಿ, 150 ಲೀಟರ್ ಮೊಸರನ್ನು ಬಳಸಲಾಗಿದೆ.
ಕಳೆದ ಎರಡು ದಿನಗಳ ಕಾಲ ಸುಮಾರು 450 ಕ್ವಿಂಟಲ್ ಜಿಲೇಬಿಯನ್ನು ತಯಾರಿಸಲಾಗಿ. ಸುಮಾರು 12 ರಿಂದ 14 ಲಕ್ಷ ಜಿಲೇಬಿ ತಯಾರಾಗಬಹುದು ಎಂದು ಬಾಣಸಿಗರು ಹೇಳಿದ್ದಾರೆ. ಜಿಲೇಬಿ ಮಾಡುವ ಕಾರ್ಯಕ್ಕೆ 120 ಬಾಣಸಿಗರು, ಅವರಿಗೆ ಸಹಾಯ ಮಾಡಲು 150 ಜನ ಹಾಗೂ ಕಾರ್ಯಕರ್ತರು ನಿರಂತರವಾಗಿ ಸೇವೆಯನ್ನು ಮಾಡುತ್ತಿದ್ದಾರೆ.