Friday, March 1, 2024

ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಎನ್.ರಾಜಣ್ಣ

ಹೊಸದಿಗಂತ ವರದಿ,ದಾವಣಗೆರೆ

ಪರಿಶಿಷ್ಟರು ಮುಖ್ಯಮಂತ್ರಿ ಆಗಬೇಕೆಂದು ಕಾಯುತ್ತಿರುವವರು ಕಾಂಗ್ರೆಸ್ಸಿನಲ್ಲಿ ಹೆಚ್ಚಾಗಿದ್ದಾರೆ. ಆದರೆ ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈಗ ಡಿಸಿಎಂ ಹುದ್ದೆಗಳು ಮಾತ್ರ ಖಾಲಿ ಇದ್ದು, ಯಾರು ಬೇಕಾದರೂ ಉಪ ಮುಖ್ಯಮಂತ್ರಿ ಆಗಬಹುದು ಎಂದು ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಜಿಲ್ಲೆಯ ಹರಿಹರ ತಾಲೂಕು ರಾಜನಹಳ್ಳಿ ಗ್ರಾಮದ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಮುಂಚಿನಿಂದಲೂ ಇದೆ. ಸಿಎಂ ಹುದ್ದೆ ಖಾಲಿಯಾದ ಮೇಲೆ ಪರಿಶಿಷ್ಟರನ್ನು ಮಾಡಬೇಕಾ, ಅಲ್ಪಸಂಖ್ಯಾತರನ್ನು ಮಾಡಬೇಕಾ, ಹಿಂದುಳಿದವರಿಗೆ ಸಿಎಂ ಮಾಡಬೇಕಾ ಎಂಬ ತೀರ್ಮಾನವಾಗುತ್ತದೆ. ಸಧ್ಯಕ್ಕೆ ಪರಿಶಿಷ್ಟರಿಗೆ ಮುಖ್ಯಮಂತ್ರಿ ಹುದ್ದೆ ವಿಚಾರ ಅಪ್ರಸ್ತುತ ಎಂದರು.

ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕೆಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರವಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಸೆಕ್ಯುಲರ್ ಎನ್ನುವ ಜೆಡಿಎಸ್ ಪಕ್ಷದ ಜಾತ್ಯತೀತ ಪದಕ್ಕೆ ನಾವು ಬೇರೆ ರೀತಿ ಅರ್ಥ ಹುಡುಕಬೇಕಾಗಿದೆ. ಸ್ವಾರ್ಥಕ್ಕೋಸ್ಕರ ಜೆಡಿಎಸ್‌ನವರು ಬಿಜೆಪಿ ಜೊತೆ ಕೈಜೋಡಿಸಿದ್ದು, ಬುದ್ಧಿವಂತರಿರುವ ರಾಜ್ಯದ ಮತದಾರರು ಯಾರಿಗೆ ಏನು ಮಾಡಬೇಕೋ ಅದನ್ನು ಸಮಯ, ಸಂದರ್ಭ ಬಂದಾಗ ಮಾಡುತ್ತಾರೆ ಎಂದು ಅವರು ನುಡಿದರು.

ಬಿಜೆಪಿ-ಜೆಡಿಎಸ್‌ನವರು ಎಲ್ಲಾ 28 ಕ್ಷೇತ್ರದಲ್ಲೂ ಸ್ಪರ್ಧಿಸುತ್ತಾರೆ. ನಾವೂ ಸಹ ಎಲ್ಲಾ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಕಾಂಗ್ರೆಸ್ಸಿನ ಎಲ್ಲಾ 28 ಅಭ್ಯರ್ಥಿಗಳು ಗೆಲ್ಲಬೇಕೆಂಬುದು ನಮ್ಮ ಅಭಿಲಾಷೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವುದರಿಂದ ಸರ್ಕಾರಕ್ಕೂ ಲಾಭವಾಗಲಿದೆ. ನೂರಕ್ಕೆ ನೂರರಷ್ಟು ಯೋಜನೆಗಳನ್ನು ಜನರಿಗೆ ಮುಟ್ಟಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಡಿಸಿಎಂ ಹುದ್ದೆಗಳನ್ನು ಎಲ್ಲಾ ಸಮುದಾಯಗಳಿಗೆ ನೀಡಿದರೆ, ಆಯಾ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನದಾಗಿ ಸಿಗುತ್ತದೆ. ಇದೇ ವಿಚಾರವನ್ನು ಜ.11ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂದಿಡುತ್ತೇವೆ. ಅಂತಿಮ ನಿರ್ಣಯವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳುತ್ತದೆ. ಬೆಂಗಳೂರಿನಲ್ಲಿ ಸೋಮವಾರ ರಾಜ್ಯ ಉಸ್ತುವಾರಿ ಸುರ್ಜಿವಾಲಾ ಜೊತೆ ಸಭೆ ಸಹ ಮಾಡಿದ್ದೇವೆ. ನಮ್ಮ ಅಭ್ಯರ್ಥಿಗಳು, ನಮ್ಮ ಗ್ಯಾರಂಟಿಗಳ ಬಗ್ಗೆಯೂ ಚರ್ಚಿಸಿದ್ದೇವೆ. ಆಗಿರುವ ಲೋಪ ಸರಿಪಡಿಸಿಕೊಳ್ಳಲು, ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ನಮ್ಮಲ್ಲೇ 138 ಶಾಸಕರಿದ್ದಾರೆ. ಆಪರೇಷನ್ ಹಸ್ತದ ಅವಶ್ಯಕತೆಯೇ ನಮಗೆ ಇಲ್ಲ. ಬೇರೆ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷ ಆಮಿಷವೊಡ್ಡುವ ಪ್ರಮೇಯವಿಲ್ಲ. ನಮ್ಮ ಪಕ್ಷದವರೇ ನಮಗೆ ಸಾಕು. ನಮ್ಮಲ್ಲಿಯೇ ಮಂತ್ರಿಯಾಗುವವರ ಸಂಖ್ಯೆ ಬಹಳ ಇರುವಾಗ ಬೇರೆ ಪಕ್ಷದವರನ್ನು ಕರೆ ತಂದು, ಮಂತ್ರಿ ಮಾಡುವ ಅವಶ್ಯಕತೆಯಾದರೂ ಏನಿದೆ? ಅನ್ಯ ಪಕ್ಷದವರನ್ನು ಕಾಂಗ್ರೆಸ್ಸಿಗೆ ಕರೆ ತರುವ ಯಾವುದೇ ಪ್ರಯತ್ನ ಆಗಿಲ್ಲ, ಆಗುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!