ಕೊಟ್ಟ ಮಾತಿನಂತೆ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ: ಡಿ.ಕೆ ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟ ಮಾತಿನಂತೆ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಕುರಿತು ಭಾವುಕರಾಗಿ ಪ್ರತಿಕ್ರಿಯಿಸಿದ ಅವರು, ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಛಳ ಬಹುಮತ ನೀಡಿದ್ದಾರೆ ಎಂದರು.

ನನ್ನ ಪಕ್ಷದ ಕಾರ್ಯಕರ್ತರು, ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಯೂಡಿ ಕೆಲಸ ಮಾಡುವುದು ಯಶಸ್ಸು ಎಂದು. ಅದೇ ರೀತಿ ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಪಕ್ಷಕ್ಕೆ ಈ ಯಶಸ್ಸು ಸಿಕ್ಕಿದೆ ಎಂದು ತಿಳಿಸಿದರು.

ಇದು ಒಬ್ಬನಿಂದ ಬಂದಿರುವ ಯಶಸ್ಸಲ್ಲ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ಶಾಸಕರುಗಳು, ಎಐಸಿಸಿ ಪದಾಧಿಕಾರಿಗಳು, ಉಸ್ತುವಾರಿಗಳು, ರಾಜ್ಯದ ನಾಯಕರುಗಳು, ಪಕ್ಷದ ಪದಾಧಿಕಾರಿಗಳು, ಬೂತ್ ಮಟ್ಟದಲ್ಲಿ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿರುವ ಎಲ್ಲಾ ಕಾರ್ಯಕರ್ತರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ನಾನು ಈಗ ಹೆಚ್ಚಾಗಿ ಏನು ಮಾತನಾಡುವುದಿಲ್ಲ. ಕಾರ್ಯಕರ್ತರು ಉತ್ಸಾಹದಿಂದ ಗಲಾಟೆ ಮಾಡುತ್ತಿದ್ದಾರೆ ಎಂದು ನನ್ನ ಚುನಾವಣಾ ಪ್ರಮಾಣಪತ್ರ ಪಡೆಯಲು ನಾನೇ ಹೋಗಬೇಕು ಎಂದು ರಾಮನಗರ ಜಿಲ್ಲಾಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದು, ಅಲ್ಲಿಂದ ಬಂದ ನಂತರ ನನ್ನ ದೇವಾಲಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!