November 19, 2026
Thursday, November 19, 2026
spot_img

ತೀವ್ರ ಚಳಿ ಲೆಕ್ಕಿಸದೇ ಫ್ರೀಡಂ ಪಾರ್ಕ್‌ನಲ್ಲೇ ರಾತ್ರಿ ಉಳಿದ ಆಶಾಕಾರ್ಯಕರ್ತೆಯರು: ಮೂರನೇ ದಿನಕ್ಕೆ ಕಾಲಿಟ್ಟ ಧರಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಹುವರ್ಷದ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದು, ನಿನ್ನೆ ಚಳಿಯಲ್ಲಿಯೂ ರಾತ್ರಿಯಿಡೀ ಧರಣಿ ಮುಂದುವರಿಸಿದ್ದಾರೆ.15,000 ಗೌರವಧನ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಎರಡನೇ ದಿನವೂ ಹೋರಾಟ ನಡೆಸುತ್ತಿದ್ದಾರೆ.

ಬುಧವಾರ ರಾತ್ರಿ ತೀವ್ರ ಚಳಿಯ ನಡುವೆಯೂ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಮಲಗಿ ಪ್ರತಿಭಟಿಸಿದ್ದು, ಸಣ್ಣ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಮಹಿಳೆಯರೂ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಬೇಡಿಕೆಗಳು ಈಡೇರುವ ತನಕ, ವಿಶೇಷವಾಗಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಆದೇಶ ಪತ್ರ ಕೈ ಸೇರುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನಾವು ಯಾವ ಕೆಲಸ ಕೊಟ್ಟರೂ ಇಲ್ಲ ಎನ್ನುವುದಿಲ್ಲ. ಹದಿನೆಂಟು ವರ್ಷಗಳಿಂದ ಒಂದೂ ಮಾತನಾಡದೇ ದುಡಿದಿದ್ದೇವೆ. ನಮಗೆ ಈಗಲೂ ಆರ್ಥಿಕ ಭದ್ರತೆ ಇಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ. ಬರೀ ಭರವಸೆ ಅಲ್ಲ, ಬೇಡಿಕೆ ಈಡೇರುವವರೆಗೂ ಜಾಗ ಖಾಲಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರೂ, ಕಾರ್ಯಕರ್ತೆಯರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಕೊರೊನಾ ಸಮಯದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ಕೆಲಸ ಮಾಡಿದಾಗ ಸರ್ಕಾರಕ್ಕೆ ನಮ್ಮ ನೆನಪಾಯಿತು, ಆದರೆ ಈಗ ಸಂಬಳ ಹೆಚ್ಚಿಸುವ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಶಾ ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರವು ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Must Read