ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸುತ್ತಿರುವ ಸಮೀಕ್ಷೆಯು ಎರಡನೇ ದಿನವೂ ಮುಂದುವರೆದಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ತಂಡವು ಶನಿವಾರ ಬೆಳಿಗ್ಗೆ ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಆಗಮಿಸಿದ್ದು, ಬಿಗಿ ಭದ್ರತೆಯ ನಡುವೆ ಇಂದು ಬೆಳಗ್ಗೆ 09.00 ಗಂಟೆಯಿಂದ ಸಮೀಕ್ಷೆ ಆರಂಭಿಸಿದೆ. ಸಹಾಯಕ ನಿರ್ದೇಶಕ ಅಲೋಕ್ ಕುಮಾರ್ ತ್ರಿಪಾಠಿ ಮತ್ತು ಸಂಜಯ್ ಮಹಂತಿ ಅವರ ನೇತೃತ್ವದಲ್ಲಿ (ಎಎಸ್‌ಐ) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿಶೇಷ ತಂಡವು ಸರ್ವೆ ನಡೆಸುತ್ತಿದೆ.
ಅಲಹಾಬಾದ್ ಹೈಕೋರ್ಟಿನ ತೀರ್ಪಿನ ಮೇರೆಗೆ ಶುಕ್ರವಾರದಂದು ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯು ಬಿಗಿ ಭದ್ರತೆಯ ನಡುವೆ ಪ್ರಾರಂಭವಾಗಿತ್ತು. ಇದೀಗ ಸಮೀಕ್ಷೆ ಕಾರ್ಯವು ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರಕರಣದ ಹಿನ್ನೆಲೆ:
17ನೇ ಶತಮಾನದ ಜ್ಞಾನವಾಪಿ ಮಸೀದಿಯನ್ನು ಈ ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ಪತ್ತೆ ಹಚ್ಚಲು ಹಿಂದೂ ಪರ ಸಂಘಟನೆಗಳು ಭಾರತೀಯ ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿದ್ದವು. ಅದರ ಅನ್ವಯ ಇದೀಗ ಸಮೀಕ್ಷೆ ನಡೆಸಲಾಗುತ್ತಿದೆ.
ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲು ನಿನ್ನೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಕೆಳ ನ್ಯಾಯಾಲಯದ ಆದೇಶದಂತೆ ಸರ್ವೆ ನಡೆಯುತ್ತಿದೆ.