ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌: ‘ಬಿ’ ಗುಂಪಿನಲ್ಲಿ ಸಿಂಧು ಸಾರಥ್ಯದ ಭಾರತ ತಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದುಬೈನಲ್ಲಿ ಫೆಬ್ರವರಿ 14ರಿಂದ 19ರ ವರೆಗೆ ನಡೆಯಲಿರುವ ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್(Badminton) ಚಾಂಪಿಯನ್‌ಶಿಪ್‌ನಲ್ಲಿ(Badminton Asia Mixed Team Championships 2023) ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಅವಳಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧು ಅವರ ಸಾರಥ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಟೂರ್ನಿಯಲ್ಲಿ 17 ತಂಡಗಳು ಭಾಗವಹಿಸಲಿವೆ. ಭಾರತದ ಜೊತೆಗೆ ಗುಂಪಿನಲ್ಲಿರುವ ಉಳಿದ ತಂಡಗಳೆಂದರೆ ಮಲೇಷ್ಯಾ, ಯುಎಇ ಮತ್ತು ಕಜಕಿಸ್ತಾನ.
ಹಾಲಿ ಚಾಂಪಿಯನ್ ಚೀನ, ಕೊರಿಯಾ, ಸಿಂಗಾಪುರ ಮತ್ತು ಉಜ್ಬೇಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎಲ್ಲ ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಿದ್ದು, ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಹೋಗಲಿವೆ. ಪ್ರತಿ ಪಂದ್ಯದಲ್ಲಿ ಎರಡು ಸಿಂಗಲ್ಸ್ ಹಾಗೂ ಮೂರು ಡಬಲ್ಸ್ ಪಂದ್ಯಗಳು ನಡೆಯಲಿವೆ.

ಭಾರತ ತಂಡದಲ್ಲಿ ಪಿ.ವಿ ಸಿಂಧು, ಆಕರ್ಷಿ ಕಶ್ಯಪ್, ಲಕ್ಷ್ಯ ಸೇನ್, ಎಚ್‌.ಎಸ್ ಪ್ರಣಯ್​, ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಕೃಷ್ಣ ಪ್ರಸಾದ್ ಗಾರ್ಗ್ ಮತ್ತು ವಿಷ್ಣುವರ್ಧನ್ ಗೌಡ್ ಪಿ, ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್, ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್, ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಕಾಣಿಸಿಕೊಂಡಿದ್ದಾರೆ. ಆದರೆ ಗಾಯಗೊಂಡಿರುವ ಸಾತ್ವಿಕ್‌ ಸಾಯಿರಾಜ್ ಮತ್ತು ಅವರ ಜತೆಗಾರ ಚಿರಾಗ್ ಶೆಟ್ಟಿ ಈ ಟೂರ್ನಿಯಲ್ಲಿ ಆಡುವುದು ಇನ್ನಷ್ಟೇ ಖಚಿತವಾಗಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!