ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದ ಭಾರತ ಹಾಕಿ ತಂಡ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಚೀನಾವನ್ನು 3-0 ಗೋಲುಗಳಿಂದ ಸೋಲಿಸಿ ಐದನೇ ಬಾರಿಗೆ ಈ ಟೂರ್ನಿಯ ಪ್ರಶಸ್ತಿಯನ್ನು ಗೆಲ್ಲುವ ಅಭಿಯಾನವನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ.
ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡ ಮೊದಲ ಕ್ವಾರ್ಟರ್‌ನಲ್ಲಿಯೇ ಗೋಲು ಗಳಿಸಿ ಮುನ್ನಡೆ ಸಾಧಿಸಿತು. 14ನೇ ನಿಮಿಷದಲ್ಲಿ ಸುಖ್‌ಜೀತ್ ಮೊದಲ ಗೋಲು ದಾಖಲಿಸಿದರು. ಅದೇ ರೀತಿ ಎರಡನೇ ಕ್ವಾರ್ಟರ್‌ನಲ್ಲಿಯೂ ಭಾರತ ತನ್ನ ಮುನ್ನಡೆಯನ್ನು ದ್ವಿಗುಣಗೊಳಿಸಿದ್ದು, ಉತ್ತಮ್ ಸಿಂಗ್ ಟೀಂ ಇಂಡಿಯಾ ಪರ ಎರಡನೇ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಅಭಿಷೇಕ್ ಮೂರನೇ ಗೋಲು ಹೊಡೆದರು. ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತ ಯಾವುದೇ ಗೋಲು ಗಳಿಸಲಿಲ್ಲ ಆದರೆ ಚೀನಾದ ಕೆಲವು ಪ್ರಯತ್ನಗಳನ್ನು ವಿಫಲಗೊಳಿಸಿ ಪಂದ್ಯವನ್ನು 3-0 ರಿಂದ ಗೆದ್ದುಕೊಂಡಿತು.