September 30, 2026
Wednesday, September 30, 2026
spot_img

ಏಷ್ಯನ್ ಗೇಮ್ಸ್ 2026: 11ನೇ ದಿನದ ಕ್ರೀಡಾ ಸಮರದಲ್ಲಿ ಭಾರತೀಯರ ‘ಗೋಲ್ಡನ್’ ಇತಿಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಗೇಮ್ಸ್ ಅಖಾಡದಲ್ಲಿ ಭಾರತೀಯ ಕ್ರೀಡಾಪಟುಗಳು ಸೃಷ್ಟಿಸುತ್ತಿರುವ ಗೆಲುವಿನ ಸಂಚಲನ 11ನೇ ದಿನವೂ ಮುಂದುವರಿದಿದೆ. ಬಿಲ್ಲುಗಾರಿಕೆ ಅಂಗಳದಲ್ಲಂತೂ ಭಾರತೀಯ ಆಟಗಾರರು ಚಿನ್ನದ ಮಳೆಯನ್ನೇ ಹರಿಸಿದ್ದು, ಏಕಕಾಲಕ್ಕೆ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡು ಇತಿಹಾಸ ಬರೆದಿದ್ದಾರೆ.

ಬಿಲ್ಲುಗಾರಿಕೆಯಲ್ಲಿ ‘ಹ್ಯಾಟ್ರಿಕ್’ ಚಿನ್ನದ ಭೇಟೆ

ಆರ್ಚರಿ ಕಾಂಪೌಂಡ್ ವಿಭಾಗದಲ್ಲಿ ಭಾರತದ ಆಟಗಾರರು ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೆ ಪೂರ್ಣ ಪ್ರಮಾಣದ ಸಾರ್ವಭೌಮತ್ವ ಸಾಧಿಸಿದರು.

ಮಹಿಳಾ ತಂಡವು ಚೀನಾ ವಿರುದ್ಧ ಅಸಾಧಾರಣ ಪ್ರದರ್ಶನ ನೀಡಿ, ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿದ್ದಲ್ಲದೆ ದಕ್ಷಿಣ ಕೊರಿಯಾದ ವಿಶ್ವದಾಖಲೆಯನ್ನು ಸರಿದೂಗಿಸಿ ಚಿನ್ನಕ್ಕೆ ಮುತ್ತಿಕ್ಕಿತು.

ಕಾಂಪೌಂಡ್ ಮಿಶ್ರ ತಂಡವು ಭರ್ಜರಿ ಜಯ ಸಾಧಿಸಿ ಬಂಗಾರವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನೇರ ಅರ್ಹತೆಯನ್ನೂ ಗಿಟ್ಟಿಸಿಕೊಂಡಿತು.

ಅತ್ಯಂತ ರೋಚಕವಾಗಿ ನಡೆದ ಪುರುಷರ ತಂಡದ ಫೈನಲ್ ಪಂದ್ಯದಲ್ಲಿ ಭಾರತವು ಚೀನಾ ತಂಡವನ್ನು ಕೊನೆ ಕ್ಷಣದಲ್ಲಿ ಮಣಿಸಿ, ದಿನದ ಮೂರನೇ ಚಿನ್ನವನ್ನು ತನ್ನದಾಗಿಸಿಕೊಂಡು ‘ಚಿನ್ನದ ಹ್ಯಾಟ್ರಿಕ್’ ಪೂರ್ಣಗೊಳಿಸಿತು.

ಶೂಟಿಂಗ್‌ನಲ್ಲಿ ಐತಿಹಾಸಿಕ ಗೆಲುವು

ಶೂಟಿಂಗ್ ಅಂಗಳದಲ್ಲೂ ಭಾರತದ ಯಶಸ್ಸಿನ ಓಟ ಮುಂದುವರಿಯಿತು. ಟ್ರ್ಯಾಪ್ ಮಿಕ್ಸ್ಡ್ ಟೀಮ್ ಫೈನಲ್‌ನಲ್ಲಿ ನೀರು ಧಂಡಾ ಮತ್ತು ಕಿನಾನ್ ಚೆನಾಯ್ ಜೋಡಿ ಆರಂಭದಲ್ಲಿ ಕೆಲವು ಪಾಯಿಂಟ್‌ಗಳನ್ನು ಕಳೆದುಕೊಂಡರೂ, ನಂತರ ಅಮೋಘ ಪುನರಾಗಮನ ಮಾಡಿದರು. ಕತಾರ್ ತಂಡವನ್ನು ಕೇವಲ 1 ಪಾಯಿಂಟ್‌ನಿಂದ ಹಿಂದಿಕ್ಕಿ ರೋಚಕವಾಗಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇದು ನೀರು ಧಂಡಾ ಅವರಿಗೆ ಸತತ ಎರಡನೇ ದಿನ ಒಲಿದ ಎರಡನೇ ಚಿನ್ನದ ಪದಕ ಎಂಬುದು ವಿಶೇಷ.

ಒಟ್ಟಾರೆಯಾಗಿ, 11ನೇ ದಿನದ ಆಟವು ಭಾರತದ ಕ್ರೀಡಾ ಇತಿಹಾಸದಲ್ಲಿ ಬಂಗಾರದ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಯಿತು.

Must Read