ಕುಶಾಲನಗರದಿಂದ ನಾಪತ್ತೆಯಾಗಿದ್ದ ಎಎಸ್ಐ ಮೃತದೇಹ ಕೊಣನೂರು ಬಳಿ ಕೆರೆಯಲ್ಲಿ ಪತ್ತೆ

ದಿಗಂತ ವರದಿ ಮಡಿಕೇರಿ:

ಕುಶಾಲನಗರ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ (52) ಅವರ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಕೊಣನೂರಿನ ಕೆರೆಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್’ನವರಾದ ಸುರೇಶ್ ಅವರು ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆದರೆ ಕರ್ತವ್ಯದ ನಿಮಿತ್ತ ಜ.22ರಂದು ಮನೆಯಿಂದ ಹೊರಟವರು ಪೊಲೀಸ್ ಠಾಣೆಗೂ ತೆರಳದೆ ಮನೆಗೂ ಹೋಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಲೊಕೇಷನ್ ಪರಿಶೀಲಿಸಿದಾಗ ಕುಶಾಲನಗರ‌ ಸಮೀಪದ‌ ಬೈಚನಹಳ್ಳಿ ಬಳಿ ಸ್ವಿಚ್ ಆಫ್ ಅಗಿರುವುದು ಕಂಡುಬಂದಿತ್ತು.
ಇತ್ತ ಎಲ್ಲೆಡೆ ಹುಡುಕಾಟ ನಡೆಸಿದ ಅವರ ಪತ್ನಿ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಲ್ಲಿನ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟವನ್ನು ನಡೆಸುತ್ತಿದ್ದರಾದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.

ಗುರುವಾರ ಸಂಜೆ ವೇಳೆಗೆ ಕೊಣನೂರು ಸಮೀಪದ ಕೂಡ್ಲೂರು ಎಂಬಲ್ಲಿನ ಕೆರೆಯಲ್ಲಿ ಕೊಳೆತ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಅಪರಿಚಿತ ಮೃತ ದೇಹದ ಬಗ್ಗೆ ಮಾಹಿತಿ ಕಲೆ ಹಾಕಿ ನಂತರ ಕುಶಾಲನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ನಾಪತ್ತೆಯಾಗಿದ್ದ ಎಎಸ್‌ಐ ಸುರೇಶ್ ಕುಟುಂಬದ ಸದಸ್ಯರು ತೆರಳಿ ಪರಿಶೀಲನೆ ನಡೆಸಿದ ಸಂದರ್ಭ, ಅದು ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಸುರೇಶ್ ಅವರ ಮೃತದೇಹ ಎಂಬುದು ಖಚಿತಗೊಂಡಿದೆ. ಕೊಣನೂರು ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಸುರೇಶ್ ಅವರ ನಾಪತ್ತೆ ಹಾಗೂ ಸಾವಿನ ಹಿಂದಿರುವ ನಿಗೂಢತೆ ಹೆಚ್ಚಿನ ತನಿಖೆಯಿಂದ ಹೊರಬೀಳಬೇಕಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!